ಅಂಕೋಲಾ : ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನಗತ್ಯ ವಿಳಂಬ,ಅನರ್ಹರಿಗೆ ಸೌಲಭ್ಯಗಳ ಮಂಜೂರಾತಿ,ನಿರ್ಲಕ್ಷ್ಯ ತನ, ಭ್ರಷ್ಟಾಚಾರ ಕುರಿತು ದೂರುಗಳು ಬಂದಲ್ಲಿ ಪ್ರಕರಣ ದಾಖಲಿಸಿ ಉಗ್ರಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದರು.
ಅವರು ಇಂದು ಅಂಕೋಲಾ ದ ನಾಡವರ ಸಮುದಾಯ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಇಲಾಖೆಯ ವಿರುದ್ಧ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಪರಿಶೀಲಿಸಲು ಲೋಕಾಯುಕ್ತದಲ್ಲಿ ಆಡಳಿತ, ತಾಂತ್ರಿಕ ಸೇರಿದಂತೆ ಪ್ರತ್ಯೇಕ ವಿಭಾಗಗಳಿದ್ದು ಅವುಗಳ ಮೂಲಕ ಸತ್ಯಶೋಧನೆ ನಡೆಸಲಾಗುವುದು. ಸರ್ಕಾರಿ, ಅರೆ ಸರ್ಕಾರಿ, ನಿಗಮ,ಮಂಡಳಿಗಳ ನೌಕರರು ಲೋಕಾಯುಕ್ತ ವ್ಯಾಪ್ತಿಯಲ್ಲಿ ಬರಲಿದ್ದು, ಕರ್ತವ್ಯದಲ್ಲಿ ಭ್ರಷ್ಟತೆ, ಸಾರ್ವಜನಿಕ ಹಣದ ದುರುಪಯೋಗ, ಕಾಮಗಾರಿಗಳಲ್ಲಿ ಭ್ರಷ್ಟತೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು , ಸರ್ಕಾರವು ತನ್ನ ಸಿಬ್ಬಂದಿಗೆ ಉತ್ತಮ ವೇತನ, ಸೌಲಭ್ಯಗಳನ್ನು ನೀಡುತ್ತಿದ್ದು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸಿ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಗುಣಮಟ್ಟದ ಪೈಪ್ ಗಳನ್ನು ಬಳಸಿ ಶುದ್ಧ ಕುಡಿಯುವ ನೀರು ಒದಗಿಸಿ, ವಾಟರ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ, ಕಲುಷಿತ ನೀರು ಸರಬರಾಜು ಬಗ್ಗೆ ದೂರುಗಳು ಬಂದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಬರುವವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಜಿಲ್ಲೆಯ ಅಂಕೋಲಾ, ಕುಮಟಾ,ಕಾರವಾರ ಆಸ್ಪತ್ರೆಯಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಲೋಕಾಯುಕ್ತ ಎಸ್ಪಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಬಗ್ಗೆ ಮತ್ತು ಅವುಗಳ ದುರಸ್ತಿಗೆ ಕಳೆದ ಒಂದು ವರ್ಷದಿಂದ ಕೈಗೊಂಡಿರುವ ಕ್ರಮಗಳ ವರದಿ ಸಲ್ಲಿಸಬೇಕು.
ಜಿಲ್ಲೆಯ ಅರಣ್ಯ ಪ್ರದೇಶವನ್ನು ಇನ್ನಷ್ಟು ಬೆಳೆಸಬೇಕು. ಜಿಲ್ಲೆಯಲ್ಲಿ 2118 ಕೆರೆಗಳನ್ನು ಗುರುತಿಸಿ ಸರ್ವೇ ಮಾಡಲಾಗಿದೆ. ಅರಣ್ಯದ ಒಳಗೆ ಇರುವ ಕೆರೆಗಳ ಬಗ್ಗೆ ಸರ್ವೇ ಮಾಡಿ ಅತಿಕ್ರಮಣವಾಗಿದ್ದಲ್ಲಿ ಕೂಡ ಅವುಗಳನ್ನು ತೆರುವಗೊಳಿಸುವಂತೆ ತಿಳಿಸಿದ ಅವರು ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವ ಹೊಣೆಗಾರಿಕೆ ಅರಣ್ಯ ಇಲಾಖೆಯ ಮೇಲಿದೆ.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತವಾಗಿ ಚಿಲ್ಲರೆ ಅಂಗಡಿಯಲ್ಲಿ, ಧಾಭಾಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದು ಈ ಕುರಿತಂತೆ ಅಬಕಾರಿ ಇಲಾಖೆಯಿಂದ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದವರು ಅಬಕಾರಿ ಲೈಸೆನ್ಸ್ ನ ದೂರುಪಯೋಗವಾಗದಂತೆ ತಡೆಯಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ ಕಾಂದು , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ರ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು