ದನಗಳ ಹಾವಳಿ ತಪ್ಪಿಸುವಂತೆ ನಾಡುಮಾಸ್ಕೇರಿ ಗ್ರಾಮಸ್ಥರ ಆಗ್ರಹ

ಗೋಕರ್ಣ: ದನಗಳ ಹಾವಳಿಯನ್ನು ತಪ್ಪಿಸುವಂತೆ ನಾಡುಮಾಸ್ಕೇರಿ ನಾಗರಿಕರ ಆಗ್ರಹದ ಮೇರೆಗೆ ಗ್ರಾಮ ಪಂಚಾಯತದ ಸಭಾಭವನದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಯಿತು.

ಅಗ್ರಗೋಣ, ಹನೇಹಳ್ಳಿ ಮತ್ತು ಗೋಕರ್ಣ ಗ್ರಾಮ ಪಂಚಾಯತ ಗಡಿ ಹಂಚಿಕೊಂಡಿರುವ ಈ ಊರಿನಲ್ಲಿ ದನಗಳು ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಇದರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ರೈತರು ಆಗ್ರಹಿಸಿದರು.
ಈ ಭಾಗದಲ್ಲಿ ಒಮ್ಮೆ ಉಪ್ಪು ನೀರು, ಪ್ರವಾಹ ಹೀಗೆ ಬೆಳೆ ಹಾನಿ ಉಂಟಾಗುತ್ತಿದ್ದು, ಇದರ ಜೊತೆ ಈಗ ದನಗಳ ಕಾಟ ಹೆಚ್ಚಾಗಿದೆ. ಸಂಜೆ ಹೊಲದಲ್ಲಿ ಉಳಿದು ಬೆಳೆ ತಿಂದು ನಾಶಮಾಡುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಅಲ್ಲದೆ ನಾವು ಸಹ ಹಸು ಸಾಕುತ್ತೇವೆ. ಆದರೆ ಹೊಲಗಳಿಗೆ ಬರದಂತೆ ತಡೆಯಲು ವರ್ಷದಲ್ಲಿ ಎಂಟು ತಿಂಗಳು ಕಟ್ಟಿ ಸಾಕುತ್ತೇವೆ. ಆದರೆ ಈಗ ಹೊರಗಿನ ದನಗಳಿಂದ ತೀವ್ರ ತೊಂದರೆಯಾಗುತ್ತಿದೆ. ಎಂದು ತಮ್ಮ ಅಳಲನ್ನು ತೊಡಿಕೊಂಡರು.

ಇದಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಪ್ರತಿಕ್ರಿಯಿಸಿ ಈಗಾಗಲೇ ಗ್ರಾಂ. ಪಂ. ಸಾಮಾನ್ಯ ಸಭೆಯ ನಿರ್ಣಯದಂತೆ ಆಯಾ ಪಂಚಾಯತಕ್ಕೆ ನೋಟಿಸ್ ನೀಡಲಾಗಿತ್ತು, ಆದರೆ ಯಾವುದೇ ಲಿಖಿತ ಉತ್ತರ ನೀಡದೆ ಮೌಖಿಕವಾಗಿ ತಿಳಿಸಿದ್ದು, ಆದರೂ ಯಾವುದೆ ಕ್ರಮತೆಗದುಕೊಳ್ಳಲಿಲ್ಲ. ಸಮಸ್ಯೆ ಹಾಗೆ ಮುಂದುವರಿದಿದೆ ಎಂದು ತಿಳಿಸಿದರು.

ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ ಮೂರು ದಿನದೊಳಗೆ ಆಯಾ ಪಂಚಾಯತ ವ್ಯಾಪ್ತಿಯ ಜಾನುವಾರು ಮಾಲಿಕರು ತಮ್ಮ ದನಗಳನ್ನು ತೆಗೆದುಕೊಂಡು ಹೋಗುವಂತೆ ಪತ್ರಿಕಾ ಪ್ರಕಟಣೆ ಹೊರಡಿಸಿ. ಒಂದು ವೇಳೆ ಅವಧಿ ಮೀರಿ ದನಕರುಗಳು ಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತಕ್ಕೆ ಸೂಚಿಸಿದರು.

ಪಿ.ಎಸ್. ಐ ಸುಧಾ ಅಘನಾಶಿನಿ ಮಾತನಾಡಿ ಈ ಸಮಸ್ಯೆ ಬಗ್ಗೆ ಅಂತಿಮ ನಿರ್ಣಯದೊಂದಿಗೆ ಕ್ರಮ ತೆಗೆದುಕೊಂಡರೆ ಕಾನೂನಿನ ಅಡಿಯಲ್ಲಿ ಅಗತ್ಯ ಸಹಕಾರ ಇಲಾಖೆಯಿಂದ ನೀಡುವುದಾಗಿ ತಿಳಿಸಿದರು.
ಜಾನುವಾರು ಅಧಿಕಾರಿ ವಿನಾಯಕ ನಾಯ್ಕ ಸಹ ತಮ್ಮ ಇಲಾಖೆಯ ಜಿಲ್ಲಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು, ಇಲ್ಲಿ ಪಂಚಾಯತ ತೆಗೆದುಕೊಳ್ಳುವ ಕ್ರಮಕ್ಕೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಂ. ಪಂ. ಅಧ್ಯಕ್ಷೆ ಧನಶ್ರೀ ಅಂಕೊಲೇಕರ, ಗ್ರಾಂ. ಪಂ. ಸದಸ್ಯರಾದ ರಾಜೇಶ ನಾಯಕ, ಚಂದ್ರಶೇಖರ ನಾಯ್ಕ, ನಾಗರಾಜ ತಾಂಡೇಲ, ರವಿ ಮೋರ್ಜೆ, ರಾಘವೇಂದ್ರ ಗೌಡ. ಗ್ರಾಂ. ಪಂ. ಅಭಿವೃದ್ದಿ ಅಧಿಕಾರಿ ವಿನಾಯಕ ನಾಯ್ಕ, ಕಾರ್ಯದರ್ಶಿ ಶ್ರೀಧರ ಬೋಮಕರ ಉಪಸ್ಥಿತರಿದ್ದರು. ರೈತರು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.