ವಿದ್ಯಾರ್ಥಿಗಳು ರೂಪಿಸಿದ ಉಪಗ್ರಹ ಹೊತ್ತು ನಭದೆಡೆಗೆ ಸಾಗಿದ ಎಸ್‌ಎಸ್‌ಎಲ್‌ವಿ

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹೊಸದಾಗಿ ಅಭಿವೃದ್ಧಿಪಡಿಸಿದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ) ಮೊದಲ ಉಡಾವಣೆ ನಡೆಸಿದೆ.

ಎಸ್‌ಎಸ್‌ಎಲ್‌ವಿ-ಡಿ1 ಎಲ್ಲಾ ಹಂತಗಳಲ್ಲಿ ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದೆ. ಕಾರ್ಯಾಚರಣೆಯ ಟರ್ಮಿನಲ್ ಹಂತದಲ್ಲಿ ಕೆಲವು ಡೇಟಾ ನಷ್ಟವಾಗುತ್ತಿದೆ. ಸ್ಥಿರ ಕಕ್ಷೆಯನ್ನು ಸಾಧಿಸಲು ಸಂಬಂಧಿಸಿದಂತೆ ಕಾರ್ಯಾಚರಣೆಯ ಅಂತಿಮ ಫಲಿತಾಂಶವನ್ನು ತೀರ್ಮಾನಿಸಲು ಡೇಟಾವನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದರು.

ಎಸ್‌ಎಸ್‌ಎಲ್‌ವಿ ಭೂಮಿಯ ವೀಕ್ಷಣಾ ಉಪಗ್ರಹ – 02 ಮತ್ತು ಸ್ಪೇಸ್ ಕಿಡ್ಜ್ ಇಂಡಿಯಾ ವಿದ್ಯಾರ್ಥಿ ತಂಡ ಅಭಿವೃದ್ಧಿಪಡಿಸಿದ ಸಹಪ್ರಯಾಣಿಕ ಉಪಗ್ರಹ ‘ಆಜಾದಿ ಸ್ಯಾಟ್’ಅನ್ನು ಹೊತ್ತೊಯ್ದಿದೆ. ಈ ಉಪಗ್ರಹದ ಪ್ರಾಥಮಿಕ ಪೇಲೋಡ್ ಇಒಎಸ್-02 ಆಗಿದೆ. ಇದು ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಉಪಗ್ರಹವಾಗಿದ್ದು, ಉಷ್ಣ ವೈಪರಿತ್ಯಗಳ ಬಗ್ಗೆ ಮಾಹಿತಿ ಒದಗಿಸುವ ಕಾರ್ಯ ಮಾಡುತ್ತದೆ.

‘ಆಜಾದಿ ಸ್ಯಾಟ್’ ಸ್ವಾತಂತ್ರ‍್ಯದ 75 ನೇ ವಾರ್ಷಿಕೋತ್ಸವವನ್ನು ಗುರುತಿಸಲು 750 ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ 75 ಪೇಲೋಡ್‌ಗಳನ್ನು ಒಳಗೊಂಡಿದೆ. ಉಪಗ್ರಹವನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳು ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಎಸ್‌ಎಸ್‌ಎಲ್‌ವಿ-ಡಿ1 ಉಡಾವಣೆಯನ್ನು ವೀಕ್ಷಿಸಿದರು.