ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮದ ನಡುವೆ ಬಾಂಬ್​ ಸ್ಫೋಟದ ಬೆದರಿಕೆ, ಮುಂಬೈನಲ್ಲಿ ಹೈ ಅಲರ್ಟ್​

ಇಡೀ ದೇಶದಾದ್ಯಂತ ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ, ಈ ಸಂದರ್ಭದಲ್ಲಿ ಬಾಂಬ್​ ಸ್ಫೋಟ ದ ಬೆದರಿಕೆ ಬಂದಿದ್ದು, ಆತಂಕ ಮೂಡಿದೆ. ಮುಂಬೈ ಪೊಲೀಸರಿಗೆ ಬಾಂಬ್​ ಬೆದರಿಕೆ ಕರೆ ಬಂದಿದ್ದು, ಹೈ ಅಲರ್ಟ್​ ಘೋಷಿಸಿದ್ದಾರೆ. ಶನಿವಾರ ಸಂಜೆ ಸುಮಾರು 6 ಗಂಟೆಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿತ್ತು.

ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ ಮುಂಬೈನಲ್ಲಿ ಸ್ಫೋಟ ಸಂಭವಿಸುತ್ತದೆ ಎಂದು ಹೇಳಿದ್ದ ಎನ್ನುವ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ. ಕರೆ ಬಂದ ಬಳಿಕ ತಪಾಸಣೆ ಶುರು ಮಾಡಲಾಗಿದೆ ಆದರೆ ಈವರೆಗೆ ಅನುಮಾನಾಸ್ಪದ ವಸ್ತುಗಳು ಎಲ್ಲೂ ಕಂಡುಬಂದಿಲ್ಲ. ಪೊಲೀಸರು ಕರೆ ಮಾಡಿದವರ ಪತ್ತೆಗೆ ಯತ್ನಿಸುತ್ತಿದ್ದಾರೆ, ಹೊಸ ವರ್ಷದ ಆಚರಣೆಯನ್ನು ಪರಿಗಣಿಸಿ, ಮುಂಬೈ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆಯನ್ನು ಕಲ್ಪಿಸಿದ್ದಾರೆ.

ಗೇಟ್‌ವೇ ಆಫ್ ಇಂಡಿಯಾ, ಮರೈನ್ ಡ್ರೈವ್, ದಾದರ್, ಬಾಂದ್ರಾ, ಬ್ಯಾಂಡ್‌ಸ್ಟ್ಯಾಂಡ್, ಜುಹು, ಮಾಧ್ ಮತ್ತು ಮಾರ್ವೆ ಬೀಚ್‌ಗಳು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಇಂದು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಭದ್ರತೆಯ ಭಾಗವಾಗಿ 22 ಉಪ ಪೊಲೀಸ್ ಆಯುಕ್ತರು, 45 ಸಹಾಯಕ ಆಯುಕ್ತರು, 2051 ಅಧಿಕಾರಿಗಳು ಮತ್ತು 11,500 ಕಾನ್‌ಸ್ಟೆಬಲ್‌ಗಳನ್ನು ವಿವಿಧೆಡೆ ನಿಯೋಜಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಪ್ರಮುಖ ರಸ್ತೆಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ಇದು ಮೊದಲ ಪ್ರಕರಣವಲ್ಲ ಮುಂಬೈ ಪೊಲೀಸರಿಗೆ ಬಾಂಬ್​ ಸ್ಪೋಟದ ಬೆದರಿಕೆ ಕರೆ ಬಂದಿರುವುದು ಮೊದಲಲ್ಲ.