ಗಂಗಾಧರ ಕೊಳಗಿಯವರ ‘ಮಾಸದ ನೆನಪು’ ಕೃತಿ ಬಿಡುಗಡೆ

ಸಿದ್ದಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದಾಪುರದ ಬಾಲಭವನದಲ್ಲಿ ಪತ್ರಕರ್ತ ಗಂಗಾಧರ ಕೊಳಗಿಯವರ ಮಾಸದ ನೆನಪು ಕೃತಿ ಬಿಡುಗಡೆ ಸಮಾರಂಭ ಶನಿವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಬದುಕು ಬರಹ ಒಂದೇ ರೀತಿಯಾಗಿರಬೇಕು. ಪುಸ್ತಕ ಹಾಗೂ ಲೇಖನ ಬರೆಯುವುದು ತುಂಬಾ ಕಷ್ಟ. ಆಡಳಿತಕ್ಕೆ, ಆಳುವವರಿಗೆ ಬೇಸರವಾಗುತ್ತದೆ ಎಂದು ಹೇಳಬೇಕಾಗಿದ್ದನ್ನು ಹೇಳದೇ ಇರುವುದು ಬರಹಗಾರ ತನಗೆ ತಾನು ಮಾಡಿಕೊಳ್ಳುವ ಮೋಸವಾಗುತ್ತದೆ. ಬರಹಗಾರರು ಹಾಗೂ ಪತ್ರಕರ್ತರು ಎಚ್ಚೆತ್ತುಕೊಂಡು ಆಡಳಿತವನ್ನು ಎಚ್ಚರಿಸದಿದ್ದರೆ ಮುಂದೆ ದೊಡ್ಡ ಕಂದಕ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಕೃತಿ ಬಿಡುಗಡೆ ಮಾಡಿದ ಸಾಹಿತಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ಬರಹಗಾರನಿಗೆ ಸಾಕ್ಷಿ ಪ್ರಜ್ಞೆ ಇರಬೇಕು. ಇತ್ತೀಚೆಗೆ ಎಲ್ಲರು ಮಾದ್ಯಮದ ದಾಸರಾಗಿದ್ದಾರೆ. ತನ್ನ ಬರಹದ ಜತೆಗೆ ಬದುಕು ಹೇಗಿರಬೇಕೆಂಬ ಪ್ರಜ್ಞೆ ಕೂಡ ಸಾಹಿತಿಯಾದವನಿಗಿರಬೇಕು ಎಂದರು.

ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಕೃತಿ ಪರಿಚಯಿಸಿ, ಭಾರತೀಯ ಅಸ್ಮಿತೆಯ ಹುಡುಕಾಟದಲ್ಲಿ ತಮ್ಮದೇ ಆದ ಭಿನ್ನ ಸೈದ್ಧಾಂತಿಕ ನಿಲುವುಗಳ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ 9 ಜನ ಸಾಹಿತಿಗಳ ಒಡನಾಟದ ಜತೆ ತನ್ನ ಬದುಕನ್ನು ಗಂಗಾಧರ ಕೊಳಗಿ ಕೃತಿಯಲ್ಲಿ ನೆನಪಿಸಿದ್ದಾರೆ. ಕನ್ನಡ ಸಾಹಿತ್ಯದ ಅದ್ಬುತ ಪ್ರತಿಭೆಗಳ ಶೋಧನೆ ನಡೆಸಿದ ಕೊಳಗಿ ಪ್ರಯತ್ನಕ್ಕೆ ಶುಭ ಕೋರುತ್ತೇನೆ ಎಂದರು.

ಸಿದ್ದಾಪುರ ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಗಣೇಶ ಭಟ್ ಸೇರಿದಂತೆ ಅನೇಕರು ಹಾಜರಿದ್ದರು.