ಸರ್ಕಾರದ ಪ್ರತಿ ಆಸ್ತಿಯ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು : ದೇಶಪಾಂಡೆ

ಹಳಿಯಾಳ : ಸರ್ಕಾರದ ಪ್ರತಿಯೊಂದು ಆಸ್ತಿಯ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು. ಸರ್ಕಾರಿ ಆಸ್ತಿಪಾಸ್ತಿ ರಕ್ಷಣೆಯ ಹೊಣೆ ಅಧಿಕಾರಿಗಳದ್ದಾಗಿದೆ. ಪ್ರತಿಯೊಂದು ಇಲಾಖೆಯವರು ಪರಸ್ಪರ ಸಮನ್ವಯತೆಯಿಂದ, ದೂರದೃಷ್ಟಿಯನ್ನಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಕರೆ ನೀಡಿದರು

ಅವರು ಪಟ್ಟಣದ ತಾಪಂ ಸಭಾ ಭವನದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ‌ ಮಾತನಾಡುತ್ತಿದ್ದರು. ಕರ್ತವ್ಯಲೋಪ ಎಸಗುವ, ಸರ್ಕಾರಿ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೊರುತ್ತಿರುವ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.

ಬರಗಾಲ ಪೀಡಿತ ಪ್ರದೇಶವಾಗಿರುವುದರಿಂದ ಮುಂದೆ ಕುಡಿಯುವ ನೀರಿನ‌ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರೈತರ ಹೊಲಗಳಲ್ಲಿಯ ಬೊರವೆಲ್ ಗಳಿಂದ ಆಯಾ ಭಾಗಕ್ಕೆ‌ ನೀರು ಪೂರೈಸಲು ಹಾಗೂ ರೈತನಿಗೆ ಅದರ ಬಿಲ್ ಪಾವತಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರುಗಳಾದ ಆರ್.ಎಚ್.ಭಾಗವಾನ್, ಶೈಲೇಶ್ ಪರಮಾನಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಾದ ಪರಶುರಾಮ ಗಸ್ತಿ, ಪ್ರಕಾಶ ಹಾಲಮ್ಮನವರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.