David Warner: ಭರ್ಜರಿ ದಾಖಲೆ ಬರೆದ ಡೇವಿಡ್ ವಾರ್ನರ್

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ (David Warner) ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಭರ್ಜರಿ ಆರಂಭ ಒದಗಿಸಿದರು.

ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟವಾಡಿದ ಬಳಿಕ ಡೇವಿಡ್ ವಾರ್ನರ್ (38) ಸಲ್ಮಾನ್ ಅಲಿ ಅಘಾ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದರು. ಈ 38 ರನ್​ಗಳ ಇನಿಂಗ್ಸ್​ನೊಂದಿಗೆ ವಾರ್ನರ್ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಸ್ಟೀವ್ ವಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರು. ಆಸೀಸ್ ತಂಡದ ಮಾಜಿ ನಾಯಕ 548 ಇನಿಂಗ್ಸ್​ಗಳ ಮೂಲಕ 18496 ರನ್​ ಕಲೆಹಾಕಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಡೇವಿಡ್ ವಾರ್ನರ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಆಸ್ಟ್ರೇಲಿಯಾ ಪರ 460 ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ ಇದುವರೆಗೆ 18502 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸೀಸ್ ಪರ ಅತ್ಯಧಿಕ ರನ್​ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ರಿಕಿ ಪಾಂಟಿಂಗ್. ಪಂಟರ್ ಖ್ಯಾತಿಯ ಪಾಟಿಂಗ್ 667 ಇನಿಂಗ್ಸ್​ಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 27368 ರನ್​ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಪಾಂಟಿಂಗ್ ದಾಖಲೆ ಸೇಫ್:

ಸದ್ಯ ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ 2ನೇ ಸ್ಥಾನಕ್ಕೇರಿದರೂ ಅಗ್ರಸ್ಥಾನ ಅಲಂಕರಿಸಲು ಸಾಧ್ಯವಿಲ್ಲ ಎನ್ನಬಹುದು. ಏಕೆಂದರೆ ಜನವರಿ 3 ರಿಂದ ಶುರುವಾಗಲಿರುವ ಪಾಕಿಸ್ತಾನ್ ವಿರುದ್ಧದ 3ನೇ ಪಂದ್ಯದ ಮೂಲಕ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

ಹಾಗೆಯೇ ಇನ್ಮುಂದೆ ಏಕದಿನ ಹಾಗೂ ಟಿ20 ತಂಡಗಳಲ್ಲೂ 37 ವರ್ಷದ ವಾರ್ನರ್ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿ ಆಸ್ಟ್ರೇಲಿಯಾ ಪರ 27 ಸಾವಿರಕ್ಕೂ ಅಧಿಕ ರನ್ ಕಲೆಹಾಕಿರುವ ರಿಕಿ ಪಾಂಟಿಂಗ್ ಅವರ ದಾಖಲೆ ಸೇಫ್ ಎಂದೇ ಹೇಳಬಹುದು.

ಆಸ್ಟ್ರೇಲಿಯಾ ಉತ್ತಮ ಆರಂಭ:

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರಾದ ಡೇವಿಡ್ ವಾರ್ನರ್ (38) ಹಾಗೂ ಉಸ್ಮಾನ್ ಖ್ವಾಜಾ (42) ಉತ್ತಮ ಆರಂಭ ಒದಗಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಲ್ಲದೆ 42.4 ಓವರ್​ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 2 ವಿಕೆಟ್ ಕಳೆದುಕೊಂಡು 114 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.