ಬೆಂಗಳೂರು, ಡಿ.26: ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಈಗಾಗಲೇ ನಾಲ್ಕು ಗ್ಯಾರಂಟಿಗಳ ಗಿಫ್ಟ್ ನೀಡಿದೆ. ಸದ್ಯ ಈಗ ಐದನೇ ಗ್ಯಾಂಟಿ ಆಗಿರುವ ಯುವ ನಿಧಿ ಯೋಜನೆಯ (Yuva Nidhi Scheme) ನೋಂದಣಿಗೂ ಚಾಲನೆ ಸಿಕ್ಕಿದೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತ ಲೆಕ್ಕಾಚಾರ ಹಾಕಿ ಯುವನಿಧಿಗೆ ಚಾಲನೆ ನೀಡಲಾಗ್ತಿದೆ. ಕಾಂಗ್ರೆಸ್ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ನೋಂದಣಿಗೆ ಇಂದು ಚಾಲನೆ ನೀಡಲಾಯ್ತು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶಿವಮೊಗ್ಗದಲ್ಲಿ ಈ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ. ಅಂದು ನಿರುದ್ಯೋಗಿ ಯುವಕರ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ. ಯುವನಿಧಿ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆದಿದ್ದು, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಐದನೇ ಗ್ಯಾರಂಟಿಗೆ ಚಾಲನೆ ಕೊಡೋ ಮೂಲಕ ಕಾಂಗ್ರೆಸ್ ಯುವ ಮತಗಳ ಮೇಲೆ ಕಣ್ಣಿಟ್ಟಿದೆ. ಯುವನಿಧಿ ಯೋಜನೆಗೆ ಪ್ರಸಕ್ತ ಸಾಲಿ ವರ್ಷದಲ್ಲಿ 250 ಕೋಟಿ ಹಾಗೂ ಮುಂದಿನ ವರ್ಷಕ್ಕೆ 1,250 ಕೋಟಿ ರೂ. ವೆಚ್ಚ ತಗುಲಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಸೇವಾಸಿಂಧು ಪೋರ್ಟ್ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇನ್ನು ಯುವನಿಧಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀವು ಎರಡು ವರ್ಷದೊಳಗೆ ಉದ್ಯೋಗ ಪಡೆದುಕೊಳ್ಳಬೇಕು. ಅದಕ್ಕೆ ಬೇಕಾದ ತರಬೇತಿಯನ್ನ ಕೌಶಲ್ಯಾಭಿವೃದ್ಧಿ ಇಲಾಖೆ ಮಾಡುತ್ತೆ. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೂ ಪ್ರೋತ್ಸಾಹ ನೀಡುತ್ತಿದ್ದೇವೆ. ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಿದರೆ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತೆ. ಹೈದರಾಬಾದ್-ಕರ್ನಾಟಕ ಭಾಗದ ಹುದ್ದೆಗಳ ಭರ್ತಿ ಮಾಡುತ್ತೇವೆ. ಈ ಭಾಗದಲ್ಲಿ ಉದ್ಯೋಗ ಭತ್ಯೆಯನ್ನು ನೀಡಲಾಗುತ್ತಿದೆ. ಹೀಗಾಗಿ ಅಲ್ಲಿ ವೈದ್ಯರು, ಶಿಕ್ಷಕರು, ಪ್ರೊಫೆಸರ್ಗಳು ಆಗಲು ಸಾಧ್ಯವಾಯ್ತು. ನಿರುದ್ಯೋಗ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತೆ ಎಂದರು.
ನನಗೆ ಹಾಗೂ ಸಿದ್ದರಾಮಯ್ಯರಿಗೂ ಇದು ಕನಸಿನ ಕರ್ನಾಟಕ
ಸರ್ಕಾರದ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ನನಗೆ ಅತೀ ಸಂತೋಷ, ಪವಿತ್ರವಾದ ದಿನ ಇವತ್ತು. ವೇದಿಕೆ ಮೇಲೆ ಮಹಾತ್ಮ ಗಾಂಧಿಜೀಯ ಕನಸಿನ ಭಾರತ ಅನ್ನುವ ಪುಸ್ತಕವನ್ನ ಶರಣು ಪ್ರಕಾಶ್ ಪಾಟೀಲ್ ಕೊಟ್ರು. ನನಗೂ ಸಿದ್ದರಾಮಯ್ಯರಿಗೂ ಇದು ಕನಸಿನ ಕರ್ನಾಟಕ. ನಾವು ವಿದ್ಯಾರ್ಥಿಗಳಿದ್ದಾಗ ಇಂತಹ ಭಾಗ್ಯಗಳು ಸಿಕ್ಕಿಲ್ಲ. ಅವಕಾಶಗಳನ್ನ ಸೃಷ್ಟಿಸಿಕೊಳ್ಳುವವನು ನಿಜವಾದ ಬುದ್ದಿವಂತ ಅಂತ ವಿವೇಕಾನಂದರು ಹೇಳಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡ ದಿನ ನೆನಪಾಗುತ್ತೆ. ಮಹಿಳೆ ಮತ್ತು ಯುವಕರ ಮೇಲೆ ವಿಶ್ವಾಸ ಇಡಬೇಕು. ಕೃಷಿಕ, ಕಾರ್ಮಿಕ ಎಲ್ಲರೂ ಸೇರಿ ಶಕ್ತಿ ತುಂಬಿತ್ತಾರೆ ಅಂತ ಅಂದು ಭಾಷಣ ಮಾಡಿ ಅಧಿಕಾರ ತಗೆದುಕೊಂಡೆ.
ಇದು ಬದಲಾವಣೆ ಅಲ್ಲ, ನಿಮ್ಮ ಶಕ್ತಿಗೆ ಉಸಿರು ತುಂಬುವ ಕೆಲಸ. ಜಿಗುಪ್ಸೆ ಆಗಬಾರದು ಈ ಯೋಜನೆ ತಂದಿದ್ದೇವೆ. ಇದು ನಮ್ಮ ಸರ್ಕಾರದ ಕಾರ್ಯಕ್ರಮ ಅಲ್ಲ, ನಿಮ್ಮ ಕಾರ್ಯಕ್ರಮ. ಅಧಿಕಾರದ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.