ನಂದಿಗದ್ದೆಗೆ ಸಾರಿಗೆ ಬಸ್ಸ್ ಬಿಡುವಂತೆ ಗ್ರಾಮಸ್ಥರ ಆಗ್ರಹ

ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮಕ್ಕೆ ಕಳೆದ 4 ತಿಂಗಳಿಂದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ಅವರ್ಲಿ ಬಳಿ ಸೇತುವೆ ಹಾಳಾದ ಕಾರಣ ಸಾರಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಸೇತುವೆಯ ಪಕ್ಕದಲ್ಲಿ ಬದಲಿ ರಸ್ತೆ ಮಾಡಲಾಗಿದ್ದು,ಎಲ್ಲಾ ವಾಹನಗಳು ಅದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಅಲ್ಲದೆ ಭಾರವಾದ ವಾಹನಗಳು ಇದೇ ರಸ್ತೆಯಲ್ಲಿ ಬರುತ್ತಿದ್ದು, ಸಾರಿಗೆ ಬಸ್ ಬರಲು ಏನು ಸಮಸ್ಯೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸರಕಾರದ ಉಚಿತ ಬಸ್ ಪ್ರಯಾಣ ಸೌಲಭ್ಯ ಈ ಭಾಗದ ಮಹಿಳೆಯರಿಗೆ ದೊರಯದಾಗಿದ್ದು, ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಅಲ್ಲದೇ ಈ ಭಾಗದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ, ಬಡವರಿಗೆ ಬಸ್ ಇಲ್ಲದೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.

ಪ್ರತಿಕ್ರಿಯೆ :

ಮಂಜುನಾಥ ಮುನ್ನೋಳಿ,ತಹಶೀಲ್ದಾರರು ಜೋಯಿಡಾ :
ಈ ಬಗ್ಗೆ ಜೋಯಿಡಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ, ಬಸ್ ಬಿಡುವ ಹಾಗೆ ಇದ್ದರೆ ಕೂಡಲೇ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇವೆ.

ಎಲ್.ಎಚ್ ರಾಥೋಡ್ – ಡಿಪೋ ಮೆನೆಜರ್ ದಾಂಡೇಲಿ :
ತಾಲೂಕಾಡಳಿತ ಅಥವಾ ಲೋಕೋಪಯೋಗಿ ಇಲಾಖೆಯಿಂದ ಬಸ್ ಬಿಡಬಹುದು ಎಂದು ಪತ್ರ ಹಾಕಿದಲ್ಲಿ ತಕ್ಷಣ ನಾವು ಬಸ್ ಸಂಚಾರವನ್ನು ಪ್ರಾರಂಭಿಸುತ್ತೇವೆ.

ಗಣಪತಿ ಆಳ್ಕೆ – ಸ್ಥಳೀಯರು :
ಕಳೆದ ಹಲವಾರು ತಿಂಗಳಿಂದ ಬಸ್ ವ್ಯವಸ್ಥೆ ಇಲ್ಲದೆ ಬಹಳಷ್ಟು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ದಾಂಡೇಲಿ ಹಾಗೂ ಯಲ್ಲಾಪುರಕ್ಕೆ ದಿನದ ಎರಡು ಬಸ್ ಮೊದಲಿನಂತೆ ಬಿಡುವ ವ್ಯವಸ್ಥೆಯಾಗಬೇಕು.