ಆಫ್ರಿಕಾ ಪ್ರವಾಸದಿಂದ ಹಠಾತ್ತನೆ ಭಾರತಕ್ಕೆ ವಾಪಸ್ಸಾದ ವಿರಾಟ್ ಕೊಹ್ಲಿ! ಕಾರಣವೇನು ಗೊತ್ತಾ?

ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಅತಿಥೇಯರ ವಿರುದ್ಧ ಈಗಾಗಲೇ ಟಿ20 ಹಾಗೂ ಏಕದಿನ ಸರಣಿಯನ್ನು ಆಡಿ ಮುಗಿಸಿದೆ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಆದರೆ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲದೆ, ತಂಡದ ಯುವ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಕೂಡ ಇಂಜುರಿಯಿಂದಾಗಿ ಮುಂಬರುವ ಸರಣಿಯಿಂದ ಹೊರಗುಳಿದಿದ್ದಾರೆ. ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಗುರಿ ಹೊಂದಿದ್ದ ರೋಹಿತ್ ಪಡೆಗೆ ಇದು ನುಂಗಲಾರದ ತುತ್ತಾಗಿದೆ.

ಅಭ್ಯಾಸ ಪಂದ್ಯಕ್ಕೆ ಅಲಭ್ಯ

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಮಾದರಿಗಳಿಂದ ಕಿಂಗ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ, ಹರಣಿಗಳ ವಿರುದ್ಧದ ಟೆಸ್ಟ್ ಸರಣಿಗೆ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಸರಣಿಯ ಆರಂಭಕ್ಕೂ ಮುನ್ನ ಕೌಟುಂಬಿಕ ತುರ್ತಿನಿಂದಾಗಿ ವಿರಾಟ್ ಕೊಹ್ಲಿ ತವರಿಗೆ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಸರಣಿಗೂ ಮುನ್ನ ನಡೆಯಲಿರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಕೊಹ್ಲಿ ಅಲಭ್ಯರಾಗಲಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಕೊಹ್ಲಿ, ತಂಡದ ಆಡಳಿತ ಮಂಡಳಿಯಿಂದ ಅನುಮತಿ ಪಡೆದಿದ್ದಾರೆ ಎಂದು ವರದಿಯಾಗಿದೆ.

ಚಿಂತೆ ಪಡುವ ಅಗತ್ಯವಿಲ್ಲ

ಬಿಸಿಸಿಐ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ವಿಚಾರದಲ್ಲಿ ಗಾಬರಿ ಪಡುವ ಅಗತ್ಯವಿಲ್ಲ. ವರದಿಗಳನ್ನು ನಂಬುವುದಾದರೆ, ವಿರಾಟ್ ಕೊಹ್ಲಿಯನ್ನು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿಲ್ಲ. ಬದಲಿಗೆ ಅವರು ಎರಡೂ ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ವಿರಾಟ್ ಕೊಹ್ಲಿ 3 ದಿನಗಳ ಹಿಂದೆ ಮುಂಬೈಗೆ ಮರಳಿದ್ದು, ಶುಕ್ರವಾರ ದಕ್ಷಿಣ ಆಫ್ರಿಕಾಗೆ ಮತ್ತೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಆದರೆ, ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ವಿರಾಟ್ ಕೊಹ್ಲಿ ಅವರ ತಯಾರಿಗೆ ಅಡ್ಡಿಯುಂಟಾಗಿದೆ.

ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಏಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆ ತುಂಬಾ ಕೆಟ್ಟದಾಗಿದೆ. ಆದ್ದರಿಂದ ವಿರಾಟ್ ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ. ವಿರಾಟ್ ದಕ್ಷಿಣ ಆಫ್ರಿಕಾದಲ್ಲಿ 51 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 719 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಸೇರಿವೆ. ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ಇಡೀ ತಂಡದ ಜೊತೆಗೆ ವಿರಾಟ್ ಕೊಹ್ಲಿ ಅವರ ಬ್ಯಾಟ್ ಸದ್ದು ಮಾಡಿದರೆ, ಈ ಬಾರಿ ಭಾರತ ಟೆಸ್ಟ್ ಸರಣಿ ಗೆಲ್ಲುವುದು ಖಚಿತ ಎಂದೇ ಹೇಳಬಹುದು.