ಡಿಸೆಂಬರ್ 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗಿದೆ. ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ತಮ್ಮ ಕುಟುಂಬದಲ್ಲಿ ಕೆಲವು ತುರ್ತು ಪರಿಸ್ಥಿತಿಯಿಂದಾಗಿ ಮೊದಲ ಟೆಸ್ಟ್‌ಗೆ ಮುಂಚೆಯೇ ಭಾರತಕ್ಕೆ ಮರಳಿದ್ದಾರೆ. ಆದರೆ ಸಮಾಧಾನಕರ ಸಂಗತಿಯೆಂದರೆ ಸದ್ಯ ಭಾರತದಲ್ಲಿರುವ ಕೊಹ್ಲಿ, ಡಿಸೆಂಬರ್ 26 ರ ಮೊದಲು ಆಫ್ರಿಕಾಗೆ ಹಿಂತಿರುಗಲಿದ್ದಾರೆ. ಕೊಹ್ಲಿ ಹೊರತಾಗಿ ಟೀಂ ಇಂಡಿಯಾದ ಯಂಗ್ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವುದು ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ.
ಟೆಸ್ಟ್ ಸರಣಿಗೆ ರುತುರಾಜ್ ಅಲಭ್ಯ
ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಕ್ರಿಕ್‌ಬಜ್ ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ತಮ್ಮ ಬಲಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ರುತುರಾಜ್ ಗಾಯಕ್ವಾಡ್ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಭಾರತ ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿ ಮಾಡಿದೆ. ಸದ್ಯ ಇಂಜುರಿಗೆ ತುತ್ತಾಗಿರುವ ರುತುರಾಜ್, ಈ ಪ್ರವಾಸದಲ್ಲಿ ಮೂರು ಮಾದರಿಯ ಸರಣಿಗೆ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೀಗ ಅವರು ಟೆಸ್ಟ್ ಸರಣಿಯನ್ನು ಆಡಲು ಸಾಧ್ಯವಾಗುವುದಿಲ್ಲ.
ಮೇಲೆ ಹೇಳಿದಂತೆ 26ರ ಹರೆಯದ ರುತುರಾಜ್ ಈ ಆಟಗಾರ ಎರಡನೇ ಏಕದಿನ ಪಂದ್ಯದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆದರೀಗ ಅವರು ಡಿಸೆಂಬರ್ 26ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ವೇಳೆಗೆ ಫಿಟ್ ಆಗಲು ಸಾಧ್ಯವಿಲ್ಲ. ರುತುರಾಜ್ ಗಾಯಕ್ವಾಡ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ, ಅವರ ಉಂಗುರದ ಬೆರಳಿಗೆ ಗಾಯವಾಗಿದೆ ಎಂದು ಬಿಸಿಸಿಐ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ.
ರುತುರಾಜ್ ಬದಲಿಯಾಗಿ ಯಾರು?
ಸದ್ಯ ಇಂಜುರಿಯಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ರುತುರಾಜ್ ಗಾಯಕ್ವಾಡ್ ಅವರ ಬದಲಿಯಾಗಿ ಬಿಸಿಸಿಐ ಇನ್ನೂ ಬೇರೆ ಯಾವ ಆಟಗಾರನ ಹೆಸರನ್ನು ಘೋಷಿಸಿಲ್ಲ. ಆದಾಗ್ಯೂ, ದಕ್ಷಿಣ ಆಫ್ರಿಕಾದಲ್ಲಿರುವ ಭಾರತ-ಎ ತಂಡದಲ್ಲಿರುವ ಕೆಲವು ಆಟಗಾರರಿಗೆ ರುತುರಾಜ್ ಬದಲಿಯಾಗಿ ಅವಕಾಶ ಸಿಗುವ ಸಾಧ್ಯತೆಗಳಿವೆ. ಅವರಲ್ಲಿ ರುತುರಾಜ್ ಬದಲಿಗೆ ಅಭಿಮನ್ಯು ಈಶ್ವರನ್ ಮತ್ತು ಸರ್ಫರಾಜ್ ಖಾನ್ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಬಹುದಾಗಿದೆ.
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.
- ಮೊದಲ ಟೆಸ್ಟ್: 26-30 ಡಿಸೆಂಬರ್, ಸೆಂಚುರಿಯನ್
- ಎರಡನೇ ಟೆಸ್ಟ್: 3-7 ಜನವರಿ, ಕೇಪ್ ಟೌನ್
ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಶಮಿ.