ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಇಡೀ ಆಸ್ಟ್ರೇಲಿಯಾ ತಂಡ 219 ರನ್‌ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಪೂಜಾ ವಸ್ತ್ರಕರ್ ಗರಿಷ್ಠ 4 ವಿಕೆಟ್ ಪಡೆದರೆ, ಸ್ನೇಹ್ ರಾಣಾ 3 ವಿಕೆಟ್ ಹಾಗೂ ದೀಪ್ತಿ ಶರ್ಮಾ 2 ವಿಕೆಟ್ ಪಡೆದು ಆಸೀಸ್ ಇನ್ನಿಂಗ್ಸ್ಗೆ ಕೊನೆ ಹಾಡಿದರು.
219ರನ್‌ಗಳಿಗೆ ಆಲೌಟ್
ಮೊದಲ ಇನ್ನಿಂಗ್ಸ್‌ನಲ್ಲಿ ಇಡೀ ಆಸ್ಟ್ರೇಲಿಯಾ ತಂಡ 219 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ತಹ್ಲಿಯಾ ಮೆಕ್‌ಗ್ರಾತ್ 50 ರನ್‌ಗಳ ಅತ್ಯಧಿಕ ಇನ್ನಿಂಗ್ಸ್‌ಗಳನ್ನು ಆಡಿದರೆ, ಬೆತ್ ಮೂನಿ 40 ರನ್ ಗಳ ಇನಿಂಗ್ಸ್ ಆಡಿದರು. ನಾಯಕಿ ಅಲಿಸ್ಸಾ ಹೀಲಿ 38 ಮತ್ತು ಕಿಮ್ ಗಾರ್ತ್ 28 ರನ್‌ಗಳ ಕೊಡುಗೆ ನೀಡಿದರು. 219 ರನ್‌ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ ಇದೀಗ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸುತ್ತಿದೆ.
98 ರನ್ ಬಾರಿಸಿದ ಭಾರತ
ಮೊದಲ ಇನಿಂಗ್ಸ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ ಒಂದು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ. ಭಾರತದ ಏಕೈಕ ವಿಕೆಟ್ ಶಫಾಲಿ ವರ್ಮಾ ರೂಪದಲ್ಲಿ ಪತನಗೊಂಡಿದೆ. ಶಫಾಲಿ 59 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಶಫಾಲಿ ತಮ್ಮ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳನ್ನು ಬಾರಿಸಿದರು. ಇವರಲ್ಲದೇ ಸ್ಮೃತಿ ಮಂಧಾನ ಅಜೇಯ 43 ರನ್ ಹಾಗೂ ಸ್ನೇಹ್ ರಾಣಾ 3 ರನ್ ಗಳಿಸಿ ಅಜೇಯರಾಗಿದ್ದಾರೆ.
ಭಾರತಕ್ಕೆ ಮೇಲುಗೈ
ಆಸ್ಟ್ರೇಲಿಯಾ ಪರ ಜೆಸ್ ಜೊನಾಸೆನ್ ಏಕೈಕ ವಿಕೆಟ್ ಪಡೆದರು. ಸದ್ಯ ಭಾರತ ತಂಡ 121 ರನ್‌ಗಳ ಹಿನ್ನಡೆಯಲ್ಲಿದೆ. ಭಾರತ ಮಹಿಳಾ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಆಸ್ಟ್ರೇಲಿಯಕ್ಕೂ ಮುನ್ನ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿತ್ತು. ಇದರಲ್ಲಿ ಭಾರತ ಮಹಿಳಾ ತಂಡ ಗೆಲುವು ಸಾಧಿಸಿತ್ತು. ಇನ್ನು ಈ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವಿನತ್ತ ಮುನ್ನುಗ್ಗುತ್ತಿದೆ.