ಅಕ್ರಮ ಗಣಿಗಾರಿಕೆ ಪತ್ತೆ, ಆದಾಯ ಸೋರಿಕೆ ತಡೆಗೆ ಬರಲಿದೆ 3ಡಿ ಡ್ರೋನ್!

ಬೆಂಗಳೂರು, ಡಿಸೆಂಬರ್ 19: ಅಕ್ರಮ ಗಣಿಗಾರಿಕೆ  ತಡೆಯಲು ಮತ್ತು ಆದಾಯ ಸೋರಿಕೆ ತಪ್ಪಿಸಿ ಆದಾಯ ಸಂಗ್ರಹ ಹೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರವು 3ಡಿ ಡ್ರೋನ್ಸ ಮೀಕ್ಷೆ ನಡೆಸಲು ಮುಂದಾಗಿರುವುದಾಗಿ ವರದಿಯಾಗಿದೆ. ಸಣ್ಣ ಖನಿಜಗಳ ಅಕ್ರಮ ಗಣಿಗಾರಿಕೆಯ ಬಗ್ಗೆ ನಿಗಾ ವಹಿಸಲು ಡ್ರೋನ್ ಸಮೀಕ್ಷೆಯನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನವಾಗಿ ರೂಪಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್ ಮೂಲಕ 10 ಜಿಲ್ಲೆಗಳನ್ನು ಪ್ರಾಯೋಗಿಕ ಕಾರ್ಯಾಚರಣೆಗೆ ಗುರುತಿಸಲಾಗಿದೆ.

ಗಣಿ ಇಲಾಖೆಯು 2024 ರ ಜನವರಿ ಅಂತ್ಯದವರೆಗೆ ಉಳಿದ 21 ಜಿಲ್ಲೆಗಳಲ್ಲಿ ಡ್ರೋನ್ ಸಮೀಕ್ಷೆಗಳನ್ನು ಕಾರ್ಯಗತಗೊಳಿಸಲು ಗಡುವನ್ನು ನಿಗದಿಪಡಿಸಿದೆ. ತಂತ್ರಜ್ಞಾನ ಮತ್ತು ಡ್ರೋನ್ ಸಮೀಕ್ಷೆಗಳು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ನಿರ್ಣಾಯಕ ಸಂಪನ್ಮೂಲಗಳನ್ನು ಖಾಲಿ ಮಾಡುತ್ತಿರುವ ಬೃಹತ್ ಪ್ರಮಾಣದ ಅಕ್ರಮ ಗಣಿಗಾರಿಕೆಯ ವ್ಯಾಪಕ ಸಮಸ್ಯೆಯನ್ನು ಪರಿಹರಿಸಲು ನೆರವಾಗಲಿದೆ ಎಂದು ಗಣಿ ನಿರ್ದೇಶಕ ಆರ್ ಗಿರೀಶ್ ಪ್ರತಿಪಾದಿಸಿದ್ದಾರೆ.

ಕರ್ನಾಟಕದಲ್ಲಿ ಸುಮಾರು 2,000 ಅಕ್ರಮ ಕ್ವಾರಿಗಳಿರುವ ಬಗ್ಗೆ ತಿಳಿದುಬಂದಿದೆ. ಡ್ರೋನ್ ಸಮೀಕ್ಷೆಗಳು ಜಲ್ಲಿ ಕಲ್ಲುಗಳನ್ನು ಹೊರತೆಗೆಯುವುದರಿಂದ ಹಿಡಿದು ಬಿಲ್ಡಿಂಗ್ ಬ್ಲಾಕ್ಸ್ ಮತ್ತು ಗ್ರಾನೈಟ್ ವರೆಗೆ ಕಲ್ಲುಗಣಿಗಾರಿಕೆ ಚಟುವಟಿಕೆಗಳ ವ್ಯಾಪ್ತಿಯನ್ನು ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿದೆ. ಗಣಿಗಾರಿಕೆ ಪ್ರದೇಶಗಳ 3D ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವಿರುವ ಹೊಸ ಡ್ರೋನ್ ವ್ಯವಸ್ಥೆಯು ಮೇಲ್ವಿಚಾರಣಾ ಪ್ರಕ್ರಿಯೆಯಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಡ್ರೋನ್ ಸಮೀಕ್ಷೆಗಳು ಗಣಿಗಾರಿಕೆ ಗುತ್ತಿಗೆ ಪ್ರದೇಶದ ಉದ್ದ ಮತ್ತು ಅಗಲವನ್ನು ದಾಖಲಿಸುವುದು ಮಾತ್ರವಲ್ಲದೆ ಕಲ್ಲುಗಣಿಗಾರಿಕೆಯ ಆಳದ ಬಗ್ಗೆ ಕೂಡ ವಿವರಗಳನ್ನು ಒದಗಿಸಲಿದೆ. ಈ ಆವಿಷ್ಕಾರದಿಂದ ಸಾಂಪ್ರದಾಯಿಕ ಚೆಕ್‌ಪೋಸ್ಟ್‌ಗಳು ಮರೆಯಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ತಂತ್ರಜ್ಞಾನವು ರಾಯಲ್ಟಿ ಮತ್ತು ತೆರಿಗೆಗಳಿಗೆ ಸ್ವಯಂಚಾಲಿತವಾಗಿ ಬಿಲ್‌ಗಳನ್ನು ಜನರೇಟ್ ಮಾಡುವ ಸಾಮರ್ಥ್ಯ ಹೊಂದಿದೆ.

ಪ್ರತಿ ಗಣಿಗೆ ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಡ್ರೋನ್ ಸಮೀಕ್ಷೆಗಳನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಸಮಗ್ರ ಮೌಲ್ಯಮಾಪನಕ್ಕೆ ಅನುವು ಮಾಡಿಕೊಡಲಿದೆ.