ಕಲಬುರಗಿ: ಬಿಎಡ್ ಎಕ್ಸಾಮ್ ಬರೆಯಲು ಹೆಚ್ಚುವರಿ ಹಣಕ್ಕೆ ಬೇಡಿಕೆ; ವಿದ್ಯಾರ್ಥಿಗಳ ಆಕ್ರೋಶ

ಕಲಬುರಗಿ, ಡಿಸೆಂಬರ್​​ 15: ಜಿಲ್ಲೆಯಲ್ಲಿ ಇತ್ತೀಚಿಗೆ ನಿಗಮ-ಮಂಡಳಿಗಳ ವಿವಿಧ ಹುದ್ದೆ (ಎಫ್‌ಡಿಎ)ಗಳ ಭರ್ತಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್​ ಡಿವೈಸ್​ ಬಳಸಿ ಅಕ್ರಮ ಎಸಗಲಾಗಿತ್ತು. ಇದು ಮಾಸುವ ಮುನ್ನವೇ ಜಿಲ್ಲೆಯ ಕಾಲೇಜ್​ ಒಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ. ಹೌದು ಬಿಎಡ್ ಪರೀಕ್ಷೆ ​​ ಬರೆಯಲು ಕಾಲೇಜಿಗೆ ಬಂದ ವಿದ್ಯಾರ್ಥಿಗಳ ಬಳಿ ಹೆಚ್ಚುವರಿಯಾಗಿ 2 ಸಾವಿರ ರೂ. ಕೇಳುತ್ತಿದೆ. ಹಣ ನೀಡದಿದ್ದರೇ ಪರೀಕ್ಷೆ ಬರೆಯಲು ಅವಕಾಶ ನೀಡಲ್ಲ ಎಂದು ಬೆದರಿಕೆ ಹಾಕಿದೆ.

ಹಾಗರಗಾ ಕ್ರಾಸ್ ಬಳಿಯಿರುವ ಜೈ ಹಿಂದ್ ಕಾಲೇಜ್​ನಲ್ಲಿ ಬಿಎಡ್​ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿದ್ದರು. ಈ ವೇಳೆ ಆಡಳಿತ ಮಂಡಳಿ ಪ್ರತಿ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಎರಡು ಸಾವಿರ ರೂ. ನೀಡುವಂತೆ ಹೇಳಿದೆ. ಹಣ ನೀಡದಿದ್ದರೇ, ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ ಎಂದಿದೆ. ಕಾಲೇಜ್ ಆಡಳಿತ ಮಂಡಳಿ‌ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನೀಡದೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.

ಇದರಿಂದ ಆತಂಕಗೊಂಡ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ನಾವು ಬಡವರ ಮಕ್ಕಳು ಎರಡು ಸಾವಿರ ರೂ. ಹೆಚ್ಚುವರಿಯಾಗಿ ಎಲ್ಲಿಂದ ಕೊಡೊಣ? ಕಾಲೇಜ್ ಫಿಸ್ 70 ಸಾವಿರ ರೂ. ಕಟ್ಟಿದ ಮೇಲೂ ಕೂಡ ಹೆಚ್ಚುವರಿಯಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಏನಿದು ಎಫ್​ಡಿಎ ಪರೀಕ್ಷಾ ಅಕ್ರಮ

ಕಳೆದ ಕೆಲ ದಿನಗಳ ಹಿಂದೆ ಯಾದಗಿರಿ ಸೇರಿದಂತೆ ರಾಜ್ಯಾದ್ಯಂತ ಕೆಇಎ ನಡೆಸಿದ್ದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿದ್ದ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಯಾದಗಿರಿ ಮತ್ತು ಕಲಬುರಗಿಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಬ್ಲೂಟೂತ್​ ಡಿವೈಸ್​ ಬಳಸಿ ಅಕ್ರಮ ಎಸಗಿದ್ದರು. ಯಾದಗಿರಿ ಜಿಲ್ಲೆಯಲ್ಲಿ 17 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ಆದರೆ ಯಾದಗಿರಿ ನಗರದ 5 ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ನಡೆದಿತ್ತು. ಪರೀಕ್ಷಾರ್ಥಿಗಳು ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದರು.

ತಕ್ಷಣ ಮಾಹಿತಿ ಪಡೆದ ಪೊಲೀಸರು ಐದು ಸೆಂಟರ್ ಗಳ ಮೇಲೆ ದಾಳಿ 9 ಜನರನ್ನ ವಶಕ್ಕೆ ಪಡೆದು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿದ ಪೊಲೀಸರು ನೇರವಾಗಿ ನ್ಯಾಯಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಈ 9 ಜನರಿಗೆ ಹೊರಗಿದ್ದು ಉತ್ತರ ಹೇಳುತ್ತಿದ್ದ 7 ಜನರಿಗೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಆದರೆ ಕಡಿಮೆ ಅವಧಿಯಲ್ಲಿ ಪರಿಪೂರ್ಣವಾಗಿ ತನಿಖೆ ನಡೆಸಲು ಸಾಧ್ಯವಾಗದ ಕಾರಣಕ್ಕೆ ಪೊಲೀಸರು ತಮ್ಮ ಕಸ್ಟಡಿಗೆ ಆರೋಪಿಗಳನ್ನ ನೀಡುವಂತೆ ಸಿಜೆಎಂ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ಬರೆಯುತ್ತಿದ್ದ 9 ಜನರಿಗೆ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ ನ್ಯಾಯಧೀಶರು 9 ಜನರಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.