ಹೊನ್ನಾವರ: ಲಿಂಗನಮಕ್ಕಿ ಜಲಾಶಯದ ಪ್ರವಾಹದ ಮೊದಲನೇ ಮುನ್ನೆಚ್ಚರಿಕೆಯ ಸೂಚನೆಯನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ತಿಳಿಸಿದೆ.
ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 1819,00 ಅಡಿಗಳಾಗಿದ್ದು ಆ. 06 ರಂದು ಬೆಳಗ್ಗೆ 8.00 ಘಂಟೆಗೆ ಜಲಾಶಯದ ನೀರಿನ ಮಟ್ಟ 1801.35 ಅಡಿಯಾಗಿದೆ.
ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 30,000 ಕ್ಯೂಸೆಕ್ಸ್ಗಳಿಗಿಂತಲೂ ಅಧಿಕವಾಗಿದ್ದು, ಇದೇ ರೀತಿ ಜಲಾಶಯಕ್ಕೆ ನೀರು ಬಂದಲ್ಲಿ ಜಲಾಶಯವು ಶೀಘ್ರ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ಆದ್ದರಿಂದ ಅಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಜಲಾಶಯದಿಂದ ಹೊರಬಿಡಲಾಗುವುದು. ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗಬೇಕೆಂದು ಕೆಪಿಸಿಎಲ್ ಸೂಚನೆಯಲ್ಲಿ ತಿಳಿಸಿದೆ.