ಹಾಸನ, ಡಿಸೆಂಬರ್ 10: ಕಾಡಾನೆ ಕಾರ್ಯಾಚರಣೆ ವೇಳೆ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿದ್ದಾನೆ. ಅರ್ಜುನ ಸಾವಿನ ಬಗ್ಗೆ ಅನೇಕರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯ ನಿವೃತ್ತ ವನ್ಯಜೀವಿ ಪಾಲಕರ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಕ ಮಾಡಿದ್ದೇವೆ. ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, 15 ದಿನದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ದಸರಾ ಆನೆ ಅರ್ಜುನನನ್ನು ಕಳೆದುಕೊಂಡಿದ್ದು ದುಃಖಕರ. ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವು ನೋವು ತಂದಿದೆ. ಅರ್ಜುನನಿಗೆ ನಾವು ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಅರ್ಜುನ ಸಮಾಧಿ ಸ್ಥಳ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಾಚರಣೆ ಅತ್ಯಂತ ಅಪಾಯದ್ದು. ಈ ಬಾಗದಲ್ಲಿ ಸಾಕಷ್ಟು ಆನೆಗಳು ಬೆಳೆ ನಾಶ ಮಾಡಿವೆ. ಚಿಕ್ಕಮಗಳೂರಿನಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದರು. ಹೀಗಾಗಿ ಆನೆ ಸೆರೆ ಹಿಡಿಯಲು ಸಾಕಷ್ಟು ಒತ್ತಡ ಇತ್ತು. ಈ ಸಂಬಂಧ ನವೆಂಬರ್ 24 ರಿಂದ ಕಾರ್ಯಾಚರಣೆ ಆರಂಭ ಆಗಿತ್ತು. ಕಾರ್ಯಾಚರಣೆಯಲ್ಲಿ ನಮ್ಮ ಅಧಿಕಾರಿಗಳು ಎಲ್ಲ ಮಾನದಂಡ ಅನುಸರಣೆ ಮಾಡಿದ್ದಾರೆ. ಪುಂಡಾನೆ ಏಕಾ ಏಕಿ ದಾಳಿ ಮಾಡಿದೆ. ಹೀಗಾಗಿ ಅವಘಡ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಆದರು ಕೆಲವರು ಘಟನೆ ಬಗ್ಗೆ ಸಾಕಷ್ಟು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ಗೆ ಅರವಳಿಕೆ ಮದ್ದು ಬಿದ್ದಿದೆ, ಅರ್ಜುನನಿಗೆ ಗುಂಡು ತಗುಲಿದೆ ಎಂಬ ಆರೋಪವಿದೆ. ಬಾಹ್ಯ ಮರಣೋತ್ತರ ಪರೀಕ್ಷೆ ಆಗಿದೆ. ಈ ವರದಿಯಲ್ಲಿ ಗುಂಡು ತಗುಲಿದ ಬಗ್ಗೆ ಮಾಹಿತಿ ಇಲ್ಲ. ಎಸ್ಓಪಿ ಅಪ್ಡೇಡ್ ಆಗಬೇಕಿದೆ. ಈ ಬಗ್ಗೆ ಕೂಡ ಕ್ರಮ ವಹಿಸುತ್ತೇವೆ. ಹೀಗಾಗಿ ಅರಣ್ಯ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದರು.