ಡೋಂಟ್ ವರಿ, ನಮಗೆ IPL​ ಇದೆ ಎಂದ ಸೂರ್ಯಕುಮಾರ್ ಯಾದವ್

ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಮುಂದಿರುವುದು ಕೇವಲ 6 ಟಿ20 ಪಂದ್ಯಗಳು ಮಾತ್ರ. ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿರುವ ಭಾರತ ತಂಡವು ಇದಾದ ಬಳಿಕ ಏಕದಿನ ಹಾಗೂ ಟೆಸ್ಟ್ ಸರಣಿ ಆಡಲಿದೆ. ಇನ್ನು ಜನವರಿಯಲ್ಲಿ ಅಫ್ಘಾನಿಸ್ತಾನ್ ವಿರುದ್ಧ 3 ಟಿ20 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಭಾರತ ತಂಡವು ಟಿ20 ಪಂದ್ಯಗಳನ್ನಾಡಲಿರುವುದು ಟಿ20 ವಿಶ್ವಕಪ್​ನಲ್ಲಿ ಎಂಬುದು ವಿಶೇಷ.

ಆದರೆ ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಮುಂದೆ ಕೇವಲ 6 ಪಂದ್ಯಗಳಿರುವುದು ನಮಗೆ ಯಾವುದೇ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂದಿದ್ದಾರೆ ಭಾರತ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್, ವಿಶ್ವಕಪ್​ಗೂ ಮುನ್ನ ಟಿ20 ಪಂದ್ಯಗಳ ಕೊರತೆಯು ಭಾರತ ತಂಡವನ್ನು ಬಾಧಿಸುವುದಿಲ್ಲ. ಏಕೆಂದರೆ ನಮ್ಮ ಮುಂದೆ ಐಪಿಎಲ್ ಇದೆ.

ನಾವು ವಿಶ್ವಕಪ್​ಗೂ ಮುನ್ನ ಸೀಮಿತ ಪಂದ್ಯಗಳನ್ನು ಹೊಂದಿದ್ದೇವೆ ನಿಜ. ಆದರೆ ಐಪಿಎಲ್​ನ 14 ಪಂದ್ಯಗಳ ಮೂಲಕ ನಾವು ಟಿ20 ವಿಶ್ವಕಪ್​ಗೆ ತಯಾರಿ ನಡೆಸಬಹುದು. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಗೆ ಸಜ್ಜಾಗಲು ನಮ್ಮ ಆಟಗಾರರಿಗೆ ಉತ್ತಮ ಆಯ್ಕೆಯಿದೆ. ಹೀಗಾಗಿ ಕೇವಲ 6 ಪಂದ್ಯಗಳಿರುವುದು ಭಾರತೀಯ ಆಟಗಾರರಿಗೆ ಸಮಸ್ಯೆಯಾಗುವುದಿಲ್ಲ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಅದರಂತೆ ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಆಡಲಿರುವ 6 ಪಂದ್ಯಗಳ ಮೊದಲ ಮ್ಯಾಚ್ ಇಂದು (ಡಿ.10) ಡರ್ಬನ್​ನಲ್ಲಿ ನಡೆಯಲಿದೆ. ಸೌತ್ ಆಫ್ರಿಕಾ ವಿರುದ್ಧದ ಈ ಸರಣಿಯ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗಾಗಿ ತಯಾರಿಗಳನ್ನು ಆರಂಭಿಸಲಿದೆ ಎನ್ನಬಹುದು. ಹೀಗಾಗಿ ಈ ಸರಣಿಯು ಭಾರತದ ಪಾಲಿಗೆ ತುಂಬಾ ಮಹತ್ವದ ಸರಣಿಯಾಗಿ ಮಾರ್ಪಟ್ಟಿದೆ.

ಕೊಹ್ಲಿ-ರೋಹಿತ್ ಇಲ್ಲ:

ಸೌತ್ ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗಳಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ವಿಶ್ರಾಂತಿಯ ಕಾರಣ ಈ ಇಬ್ಬರು ಆಟಗಾರರು ಸೀಮಿತ ಓವರ್​ಗಳ ಸರಣಿಗಳಿಂದ ಹೊರಗುಳಿದಿದ್ದು, ಇದಾಗ್ಯೂ ಟೆಸ್ಟ್ ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಟಿ20 ವಿಶ್ವಕಪ್ ಯಾವಾಗ?

ವೆಸ್ಟ್ ಇಂಡೀಸ್-ಯುಎಸ್​ಎ ಆತಿಥ್ಯವಹಿಸಲಿರುವ ಟಿ20 ವಿಶ್ವಕಪ್ ಜೂನ್ 4 ರಿಂದ ಶುರುವಾಗಲಿದೆ. ಅಂದರೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದೆ.

ಭಾರತ-ಸೌತ್ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ:

  1. ಡಿಸೆಂಬರ್ 10- ಮೊದಲ ಟಿ20 ಪಂದ್ಯ (ಡರ್ಬನ್)
  2. ಡಿಸೆಂಬರ್ 12- ಎರಡನೇ ಟಿ20 ಪಂದ್ಯ (ಗೆಬರ್ಹ)
  3. ಡಿಸೆಂಬರ್ 14- ಮೂರನೇ ಟಿ20 ಪಂದ್ಯ (ಜೋಹಾನ್ಸ್​ಬರ್ಗ್​)

ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.