ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್​​ಗಿರಿ: ಯುವಕ-ಯುವತಿಯನ್ನ ತಡೆದು ಹಲ್ಲೆಗೆ ಯತ್ನ

ಮಂಗಳೂರು, ಡಿಸೆಂಬರ್​​​ 10: ಕರಾವಳಿ ಹೇಳಿಕೇಳಿ ಕೋಮು ಸೂಕ್ಷ್ಮ ಪ್ರದೇಶ. ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಸಾಮಾನ್ಯವಾಗಿದೆ. ಇದೀಗ ಮತ್ತೆ ನೈತಿಕ ಪೊಲೀಸ್​​ಗಿರಿ ನಡೆದಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಜಾರು ಎಂಬಲ್ಲಿ ಘಟನೆ ನಡೆದಿದ್ದು, ಯುವಕ-ಯುವತಿಯನ್ನ ತಡೆದು ಹಲ್ಲೆಗೆ ಯತ್ನಿಸಲಾಗಿದೆ. ವಾರದ ಹಿಂದೆ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.

ಹಲ್ಲೆಗೆ ಯತ್ನಿಸಿದ ಆರೋಪಿಗಳು ಪರಾರಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬೈಕ್​ನಲ್ಲಿ ಹೋಗುತ್ತಿದ್ದ ಜೋಡಿಯನ್ನು ಹಿಂಬಾಲಿಸಿ, ದಾಳಿ ಮಾಡಿದ ಬಜರಂಗದಳ!

ಇತ್ತೀಚೆಗೆ ಜಿಲ್ಲೆಯ ಮಂಗಳೂರಿನ ಮೊರ್ಗನ್ಸ್ ಗೇಟ್ ಬಳಿ ಅನ್ಯಕೋಮಿನ ಯುವಕನೊಂದಿಗೆ ಚಿಕ್ಕಮಗಳೂರಿನ ಯುವತಿ ಸುತ್ತಾಡುತ್ತಿದ್ದಾಗ ತಡೆದು ಬಜರಂಗದಳದ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನಡೆಸಿದ್ದರು.

ಮಂಗಳೂರಿನ ಮುಳುಹಿತ್ಲು ಬಳಿಯ ಸ್ಟೋರ್ ಒಂದರಲ್ಲಿ ಚಿಕ್ಕಮಗಳೂರು ಮೂಲದ ಸೌಜನ್ಯ ಮತ್ತು ಮಂಗಳೂರಿನ ಮಂಕಿ ಸ್ಟ್ಯಾಂಡ್ ನಿವಾಸಿ ನೂರುಲ್ಲಾ ಅಮೀನ್ ಕೆಲಸ ಮಾಡುತ್ತಿದ್ದರು. ಮಾರ್ಗನ್ಸ್ ಗೇಟ್ ಬಳಿ ಇಬ್ಬರು ಬೈಕ್​ನಲ್ಲಿ ಹೋಗುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಅವರನ್ನು ಹಿಂಬಾಲಿಸಿದ್ದರು.

ಅರ್ಧ ದಾರಿಯಲ್ಲಿ ಅವರನ್ನು ತಡೆದು, ಅವರ ಮೇಲೆ ದಾಳಿ ನಡೆಸಿದ್ದರು. ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು ಯುವಕ ಮತ್ತು ಯುವತಿಯ ಐಡಿ ಕಾರ್ಡ್ ಪಡೆದುಕೊಂಡಿದ್ದರು. ಬಳಿಕ ಅವರಿಗೆ ಚೆನ್ನಾಗಿ ತರಾಟೆಗೆ ತೆಗೆದುಕೊಂಡು ಬೆದರಿಕೆ ಹಾಕಿದ್ದರು.

ವಿಚಾರ ತಿಳಿಸಿದಂತೆ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು. ಎರಡು ಕೋಮುವಿನ ಜನರು ಸ್ಥಳಕ್ಕೆ ಜಮಯಿಸುವ ಹಂತಕ್ಕೆ ಘಟನೆ ತಲುಪಿತ್ತು. ತಕ್ಷಣ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಸ್ಥಿತಿ ಹತೋಟಿಗೆ ತಂದಿದ್ದರು.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ಇತ್ತೀಚಿನ ಯಾತ್ರೆ ಬಳಿಕ ನಡೆದ ಮೊದಲ ನೈತಿಕ ಪೊಲೀಸ್ ಗಿರಿ ಇದಾಗಿತ್ತು.