ಬೆಂಗಳೂರು, ಡಿ.10: ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಆಸಿಡ್ ದಾಳಿ ಪ್ರಕರಣಗಳಲ್ಲಿ ಅತಿ ಹೆಚ್ಚು ದಾಳಿ ನಡೆದಿರುವುದು ಬೆಂಗಳೂರಿನಲ್ಲಿ ಎಂಬ ಮಾಹಿತಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದುಬಂದಿದೆ.
ಅಂಕಿಅಂಶಗಳ ಪ್ರಕಾರ, ಎನ್‌ಸಿಆರ್‌ಬಿ ಡೇಟಾದಲ್ಲಿ ಪಟ್ಟಿ ಮಾಡಲಾದ 19 ಮೆಟ್ರೋಪಾಲಿಟನ್ ನಗರಗಳ ಪೈಕಿ, ಕಳೆದ ವರ್ಷ ಎಂಟು ಮಹಿಳೆಯರು ಆಸಿಡ್ ದಾಳಿಗೆ ಒಳಗಾಗುವುದರೊಂದಿಗೆ ಬೆಂಗಳೂರು ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2022 ರಲ್ಲಿ ಏಳು ಮಹಿಳೆಯರು ಆಸಿಡ್ ದಾಳಿಗೆ ಬಲಿಯಾದ ದೆಹಲಿ ಎರಡನೇ ಸ್ಥಾನದಲ್ಲಿದೆ ಮತ್ತು ಐದು ಪ್ರಕರಣಗಳು ದಾಖಲಾಗಿರುವ ಅಹಮದಾಬಾದ್ ಮೂರನೇ ಸ್ಥಾನದಲ್ಲಿ ಇದೆ ಎಂದು ಅಂಕಿಅಂಶಗಳು ತಿಳಿಸಿವೆ.
ಎನ್‌ಸಿಆರ್‌ಬಿ ದತ್ತಾಂಶದ ವಿಶ್ಲೇಷಣೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 7 ಆಸಿಡ್ ದಾಳಿ ಯತ್ನ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಬೆಂಗಳೂರಿನಲ್ಲಿ ಕಳೆದ ವರ್ಷ ಅಂತಹ ಮೂರು ಪ್ರಕರಣಗಳು ದಾಖಲಾಗಿವೆ ಎಂದು ತೋರಿಸಿದೆ.
ಏತನ್ಮಧ್ಯೆ, ಹೈದರಾಬಾದ್ ಮತ್ತು ಅಹಮದಾಬಾದ್‌ನಂತಹ ಮೆಟ್ರೋಪಾಲಿಟನ್ ನಗರಗಳು 2022 ರಲ್ಲಿ ಎರಡು ಆಸಿಡ್ ದಾಳಿ ಯತ್ನ ಪ್ರಕರಣಗಳನ್ನು ದಾಖಲಿಸಿವೆ. ಕಳೆದ ವರ್ಷ ಕೆಲಸಕ್ಕೆ ಹೋಗುತ್ತಿದ್ದ 24 ವರ್ಷದ ಎಂ.ಕಾಂ ಪದವೀಧರ ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಲಾಗಿತ್ತು. ಇದು ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು.
ಪೊಲೀಸರ ಪ್ರಕಾರ, ಆರೋಪಿಯು ಹಲವು ವರ್ಷಗಳಿಂದ ಮಹಿಳೆಯನ್ನು ಹಿಂಬಾಲಿಸುತ್ತಿದ್ದ. ಮದುವೆಗೆಂದು ಆಕೆಯನ್ನು ಪೀಡಿಸುತ್ತಿದ್ದನು. ಆದರೆ ಆತನ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕೆ ಆಕೆಯ ಮೇಲೆ ಆ್ಯಸಿಡ್ ಎರಚಿದ್ದನು. ಈ ವ್ಯಕ್ತಿಯನ್ನು ಮೇ ತಿಂಗಳಲ್ಲಿ ತಿರುವಣ್ಣಾಮಲೈ ಆಶ್ರಮದಲ್ಲಿ ಸ್ವಾಮಿ ವೇಷದಲ್ಲಿದ್ದಾಗ ಬಂಧಿಸಲಾಗಿತ್ತು.
ಜೂನ್ 2023 ರಲ್ಲಿ, ಸಂತ್ರಸ್ತ ಮಹಿಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಅವರ ಸೆಕ್ರೆಟರಿಯೇಟ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಯಿತು. ಇದೇ ರೀತಿಯ ಮತ್ತೊಂದು ಪ್ರಕರಣವು ಜೂನ್ 10, 2022 ರಂದು ವರದಿಯಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಸ್ನೇಹಿತೆಯ ಮುಖದ ಮೇಲೆ ಆಸಿಡ್ ಎರಚಿದ್ದನು.