ಅಂಕೋಲಾ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ್ ಪಿ ಗಾಂವಕರ ಅವರು ಜಿಲ್ಲಾ ಯೋಜನಾ ಉಪಸಮನ್ವಯ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದು ಗುರುವಾರ ಅಧಿಕಾರ ಸ್ವೀಕರಿಸಿದರು.
ಕ್ರಿಯಾಶೀಲ ವ್ಯಕ್ತಿತ್ವದ ಭಾಸ್ಕರ್ ಪಿ ಗಾಂವಕರ ವೃತ್ತಿ ಜೀವನದಲ್ಲಿ ಸಮಾಜಮುಖಿ ಮತ್ತು ವಿದ್ಯಾರ್ಥಿ ಪರ ನಿಲುವುಗಳಿಂದ ಜನ ಮೆಚ್ಚುಗೆಗಳಿಸಿದ್ದರು. ಶಿಕ್ಷಕ ವೃತ್ತಿಯ ಆರಂಭಿಕ ಹಂತದಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ತಾಲ್ಲೂಕಿನ ಬೇಲೆಕೇರಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿ ಪ್ರಸಂಶನೀಯ ಸೇವೆ ಸಲ್ಲಿಸಿದ್ದರು. ಸ್ಥಳೀಯ ಪಾಲಕರು ಮತ್ತು ದಾನಿಗಳ ನೆರವಿನಿಂದ ಗುಣಾತ್ಮಕ ಶಿಕ್ಷಣ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರು.
ಇತ್ತೀಚಿನ ಕೆಲವು ವರ್ಷಗಳಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜನಪ್ರತಿನಿಧಿಗಳು ಮತ್ತು ದಾನಿಗಳ ನೆರವಿನಿಂದ ಶಾಲೆಗೆ ಅಗತ್ಯವಾದ ಮೂಲಸೌಕರ್ಯ ಪೀಠೋಪಕರಣ ಮತ್ತು ಬೋಧನಾ ಪರಿಕರಗಳನ್ನು ಒದಗಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿಗಳಲ್ಲಿ ಶಿಸ್ತು ಸಮನ್ವಯತೆ ಮತ್ತು ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಕ್ರಮ ಕೈಗೊಂಡಿದ್ದರು. ಅವರ ಅವಧಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದರು.
ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಉರ್ದು ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು ಎಲ್ಲರೊಂದಿಗೆ ಶಾಲೆಯ ಮುಖ್ಯಸ್ಥರಾಗಿ ಸಹಕಾರ ಮನೋಭಾವದಿಂದ ವರ್ತಿಸುತ್ತಿದ್ದರು.
ಶಾಲಾ ಅವಧಿಯ ಪೂರ್ವ ಮತ್ತು ನಂತರದಲ್ಲಿಯೂ ಶಾಲೆಯಲ್ಲಿದ್ದು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದರು. ರವಿವಾರವು ಸೇರಿದಂತೆ ರಜಾ ಅವಧಿಯಲ್ಲಿಯೂ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಅವರ ದಿನಚರಿಯಾಗಿತ್ತು.
ಎಲ್ಲರೊಂದಿಗೂ ಸಹಬಾಳ್ವೆಯಿಂದಿದ್ದ ಭಾಸ್ಕರ್ ಪಿ ಗಾಂವಕರ ಅವರಿಗೆ ಪದೋನ್ನತಿ ದೊರಕಿರುವುದು ಹರ್ಷ ತಂದಿದೆ. ಶಾಲೆಯ ಬಗ್ಗೆ ಅವರು ಹೊಂದಿರುವ ಕಳಕಳಿ ಮತ್ತು ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಅವರಿಗಿರುವ ಜವಾಬ್ದಾರಿ ಮಾದರಿಯಾಗಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಪದೋನ್ನತಿ ಹೊಂದಿದ ಭಾಸ್ಕರ್ ಪಿ ಗಾಂವಕರ ಶಾಲಾ ಶಿಕ್ಷಣ ಇಲಾಖೆಯ ಕಾರವಾರದ ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.