ನಟಿ ಲೀಲಾವತಿ ನಿಧನ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಮತ್ತಿತರರಿಂದ ಸಂತಾಪ ಸೂಚನೆ

ಕನ್ನಡದ ಹಿರಿಯ ನಟಿ ಲೀಲಾವತಿ ಅವರು ವಯೋ ಸಹಜ ಅನಾರೋಗ್ಯ ಹಾಗೂ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು, ಡಿ.8: ಕನ್ನಡದ ಹಿರಿಯ ನಟಿ ಲೀಲಾವತಿ (Leelavati) ಅವರು ವಯೋ ಸಹಜ ಅನಾರೋಗ್ಯ ಹಾಗೂ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi), ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಅನೇಕರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಹೆಸರಾಂತ ನಟಿ ಲೀಲಾವತಿ ನಿಧನದ ಸುದ್ದಿ ಕೇಳಿ ದುಃಖವಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಿನಿಮಾದ ನೈಜ ಪ್ರತೀಕವಾದ ಅವರು ಹಲವು ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ, ತಮ್ಮ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆ ಅಲಂಕರಿಸಿದ್ದರು. ಹಿರಿಯ ನಟಿ ಲೀಲಾವತಿಯವರ ವೈವಿಧ್ಯಮಯ ಪಾತ್ರಗಳು ಅದ್ಭುತ ಪ್ರತಿಭೆಯನ್ನ ಸದಾ ಸ್ಮರಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನಮ್ಮ ಸಂತಾಪ ಸೂಚಿಸುತ್ತೇನೆ, ಓಂ ಶಾಂತಿ ಎಂದು ಮೋದಿ ಸಂತಾಪ ಸೂಚಿಸಿದರು.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ.