ಹಿರಿಯ ನಟಿ ಲೀಲಾವತಿ ಅವರ ನಿಧನದ ಸುದ್ದಿ ತಿಳಿದು ಆಪ್ತರಿಗೆ, ಅಭಿಮಾನಿಗಳಿಗೆ ಹಾಗೂ ಚಿತ್ರರಂಗದವರಿಗೆ ತೀವ್ರ ನೋವು ಉಂಟಾಗಿದೆ. ಇಹಲೋಕ ತ್ಯಜಿಸುವುದಕ್ಕೂ ಮುನ್ನ ಲೀಲಾವತಿ ಅವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಎಲ್ಲರಿಗೂ ಮಾದರಿ ಆಗುವ ರೀತಿಯಲ್ಲಿ ದಾನ, ಧರ್ಮ ಮಾಡಿದ್ದರು.
ಖ್ಯಾತ ನಟಿ ಲೀಲಾವತಿ (Leelavathi) ಅವರು 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರನ್ನು ಎಲ್ಲರೂ ಪ್ರೀತಿಯಿಂದ ಅಮ್ಮ ಎಂದು ಕರೆಯುತ್ತಿದ್ದರು. ಕೇವಲ ವಯಸ್ಸಿನ ಕಾರಣದಿಂದ ಈ ರೀತಿ ಕರೆಯುತ್ತಿರಲಿಲ್ಲ. ತಾಯಿ ಕರುಳಿನ ಗುಣದಿಂದಾಗಿ ಎಲ್ಲರ ಪಾಲಿಗೂ ಅವರು ಅಮ್ಮನಾಗಿದ್ದರು. ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಕೂಡ ತಾಯಿಯ ಪ್ರೀತಿಯನ್ನು ಅವರು ತೋರುತ್ತಿದ್ದರು. ಮೂಕ ಪ್ರಾಣಿಗಳ ಬಗ್ಗೆ ಲೀಲಾವತಿ ಅವರಿಗೆ ಇದ್ದ ಕಾಳಜಿ ಅಪಾರ. ಹಾಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಪಶು ಆಸ್ಪತ್ರೆಯನ್ನು ಕಟ್ಟಿಸಿದರು. ಅದಕ್ಕಾಗಿ ಅವರು ಖರ್ಚು ಮಾಡಿದ್ದು ಬರೋಬ್ಬರಿ 45 ಲಕ್ಷ ರೂಪಾಯಿ! ಕೆಲವೇ ದಿನಗಳ ಹಿಂದೆ ಈ ಆಸ್ಪತ್ರೆ (Veterinary Hospital) ಉದ್ಘಾಟನೆ ಆಯಿತು. ಆ ಸತ್ಕಾರ್ಯದಿಂದ ಸಮಾಧಾನಗೊಂಡ ಬಳಿಕವೇ ಲೀಲಾವತಿ ಅವರು ಇಹಲೋಕ ತ್ಯಜಿಸಿದರು. ತಾವು ಅಂದುಕೊಂಡಿದ್ದ ಕೆಲಸವನ್ನು ಮಾಡಿ ಮುಗಿಸಿಯೇ ಅವರು ಕೊನೆಯುಸಿರು ಎಳೆದರು.
ನಟನೆಯಲ್ಲಿ ಬ್ಯುಸಿ ಆಗಿದ್ದಾಗಲೇ ವ್ಯವಸಾಯದ ಬಗ್ಗೆ ಲೀಲಾವತಿ ಅವರಿಗೆ ಆಸಕ್ತಿ ಮೂಡಿತ್ತು. ಅವಕಾಶಗಳು ಕಡಿಮೆ ಆದಾಗ ಅವರ ಕೈ ಹಿಡಿದಿದ್ದು ಅದೇ ಕೃಷಿ. ಇದರ ಜೊತೆಗೆ ಹಲವು ಪ್ರಾಣಿಗಳನ್ನು ಅವರು ಸಾಕಿದ್ದರು. ನೆಲಮಂಗಲದ ಸೋಲದೇವನಹಳ್ಳಿಯನ್ನು ಲೀಲಾವತಿ ಅವರ ತೋಟ ಇದೆ. ಪುತ್ರ ವಿನೋದ್ ರಾಜ್ ಜೊತೆ ಸೇರಿ ಅದನ್ನು ಅವರು ನೋಡಿಕೊಳ್ಳುತ್ತಿದ್ದರು. ತಮ್ಮ ಮನೆ ಮತ್ತು ತೋಟದ ಬಳಿ ಬರುವ ನವಿಲು ಮುಂತಾದ ಪಕ್ಷಿಗಳಿಗೆ ಅವರು ಆಹಾರ ನೀಡುತ್ತಿದ್ದರು. ಬೀದಿ ನಾಯಿಗಳಿಗೂ ಊಟ ಹಾಕುತ್ತಿದ್ದರು. ತಮ್ಮ ಮನೆಯಲ್ಲಿನ ಹಲ್ಲಿಗೂ ಅವರು ಆಹಾರ ನೀಡುತ್ತಿದ್ದರು. ಇರುವೆಗಳಿಗೂ ಖುಷಿಯಿಂದ ಆಹಾರ ಹಾಕುತ್ತಿದ್ದರು!
ಪ್ರಾಣಿಗಳ ಬಗ್ಗೆ ಲೀಲಾವತಿ ಹೊಂದಿದ್ದ ಪ್ರೀತಿ ಕೇವಲ ತೋರಿಕೆಗೆ ಮಾತ್ರವಲ್ಲ. ಸೋಲದೇವನ ಹಳ್ಳಿಯ ಸುತ್ತಮುತ್ತ ಯಾವುದೇ ಪ್ರಾಣಿಗಳಿಗೆ ತೊಂದರೆ ಆದರೂ ಕೂಡ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕೆ ಅವರು ಪಶು ಆಸ್ಪತ್ರೆ ಕಟ್ಟಿಸಲು ನಿರ್ಧರಿಸಿದರು. ಪುತ್ರ ವಿನೋದ್ ರಾಜ್ ಅವರು ಆ ಕಾರ್ಯವನ್ನು ಪೂರ್ಣಗೊಳಿಸಿದರು. ಈ ತಾಯಿ-ಮಗನ ಕಾರ್ಯಕ್ಕೆ ಕೆಲವು ಕಿಡಿಗೇಡಿಗಳಿಂದ ಅಡ್ಡಿ ಉಂಟಾದರೂ ಕೂಡ ಅವರು ಹಿಂದೆ ಸರಿಯಲಿಲ್ಲ. ಲೀಲಾವತಿ ಅವರು ತಾವು ಅಂದುಕೊಂಡ ಕೆಲಸವನ್ನು ಮಾಡಿಯೇ ತೀರಿದರು. ಈಗ ಅವರು ಕಟ್ಟಿಸಿದ ಸುಸಜ್ಜಿತವಾದ ಪಶು ಆಸ್ಪತ್ರೆ ಕಾರ್ಯಾರಂಭ ಮಾಡಿದೆ. ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಉದ್ಘಾಟನೆಗೊಂಡಿದೆ.
ಜನರ ಬಗ್ಗೆಯೂ ಅಷ್ಟೇ ಕಾಳಜಿ ಹೊಂದಿದ್ದ ಲೀಲಾವತಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದರು. ಹಳ್ಳಿಯ ಜನರಿಗೆ ಇದರಿಂದ ಅನುಕೂಲ ಆಗುತ್ತಿದೆ. ಬಡ ಕಲಾವಿದರಿಗೆ ಜೀವನಕ್ಕೆ ನೆರವಾಗುವ ಉದ್ದೇಶದಿಂದ ಪ್ರತಿ ತಿಂಗಳು ಮಾಶಾಸನ ನೀಡುವ ವ್ಯವಸ್ಥೆ ಮಾಡಿದ್ದರು. ಅನೇಕ ಕಲಾವಿದರ ಜೀವನ ಇದರಿಂದ ನಡೆಯುತ್ತಿದೆ. ಸಿನಿಮಾ ಮತ್ತು ಕೃಷಿಯಿಂದ ತಾವು ಸಂಪಾದಿಸಿದ ಹಣದಲ್ಲಿ ಬಹುಪಾಲು ಮೊತ್ತವನ್ನು ಅವರು ಈ ರೀತಿಯ ಸಮಾಜಮುಖಿ ಕೆಲಸಕ್ಕೆ ನೀಡಿದ್ದಾರೆ. ದೇವರು ಮೆಚ್ಚುವಂತಹ ಇಂಥ ಕಾರ್ಯಗಳನ್ನು ಮಾಡಿ ಲೀಲಾವತಿ ಅವರು ಇಹಲೋಕ ತ್ಯಜಿಸಿದ್ದಾರೆ.