ಅದು ನಿತ್ಯ ಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯ ಹರಿಯುವ ಚರಂಡಿ ನೀರಿನ ಕಾಲುವೆ. ನಿತ್ಯ ಗಲೀಜು ನೀರು ದುರ್ವಾಸನೆ ಕಾಣ್ತಿದ್ದ ಜನರಿಗೆ ಮೊನ್ನೆ ಮಂಗಳವಾರ ಕಾಲುವೆಯಲ್ಲಿ ಬೇರೆಯದ್ದೆ ಕಾಣಿಸಿದ್ದು ಒಂದು ಕ್ಷಣ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಅಲ್ಲಿ ಗಲೀಜಿನ ಜೊತೆಗೆ ತ್ಯಾಜ್ಯ ಸಹ ಬಿದ್ದಿದ್ದು ಕೆಂಪು ಬಣ್ಣದ ಅದೊಂದು ಬಟ್ಟೆ ಮಾತ್ರ ಅನುಮಾನಾಸ್ಪದ ರೀತಿಯಲ್ಲಿ ಕಂಡಿದ್ದು ಬಟ್ಟೆಯನ್ನ ತೆಗೆದು ನೋಡಿದಾಗ ಸಿಕ್ಕಿದ್ದು ಅಕ್ಷರಶಃ ಶಾಕ್. ಯಾಕಂದ್ರೆ ಆ ಬಟ್ಟೆಯಲ್ಲಿದ್ದಿದ್ದು ಎರಡು ವರ್ಷದ ಮುದ್ದು ಕಂದಮ್ಮನ ಮೃತದೇಹ. ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಬಳಿಯಿರುವ ಚರಂಡಿ ಕಾಲುವೆಯಲ್ಲಿ ಪ್ರತಿನಿತ್ಯ ಕೈಗಾರಿಕೆ ಹಾಗೂ ಸುತ್ತಮುತ್ತಲಿನ ಮನೆಗಳ ಚರಂಡಿ ನೀರು ಹರಿದೋಗ್ತಿತ್ತು. ಆದ್ರೆ ನಿತ್ಯ ಚರಂಡಿ ನೀರು ಹರಿಯುವ ಈ ಕಾಲುವೆಯಲ್ಲಿ ಮಂಗಳವಾರ ಸಂಜೆ ಅನುಮಾನಾಸ್ಪದ ರೀತಿಯಲ್ಲಿ ಕೆಂಪು ಬಣ್ಣದ ಸೀರೆ ಕಂಡಿದ್ದು ಸ್ಥಳೀಯ ಯುವಕರು ಸೀರೆ ಬಿಚ್ಚಿ ನೋಡಿದ್ದಾರೆ. ಈ ವೇಳೆ ಎರಡು ವರ್ಷದ ಮುದ್ದು ಕಂದಮ್ಮಳ ಮೃತದೇಹವನ್ನ ಸೀರೆಯಲ್ಲಿ ಸುತ್ತಿ ಕಾಲುವೆಯಲ್ಲಿ ಎಸೆದಿರುವುದು ಗೊತ್ತಾಗಿದೆ. ಹೀಗಾಗಿ ಮಗುವಿನ ಮೃತದೇಹ ಕಂಡು ಒಂದು ಕ್ಷಣ ಶಾಕ್ ಆದ ಸ್ಥಳೀಯರು ಮಗುವಿನ ಮೃತದೇಹವನ್ನ ಚರಂಡಿಯಿಂದ ಹೊರಗಡೆ ಎತ್ತಿಕೊಂಡು ಬಂದು ಪರಿಶೀಲನೆ ನಡೆಸಿದ್ದು ಮಗು ಮೃತಪಟ್ಟಿರುವುದು ದೃಢಪಟ್ಟಿದೆ.
ಚರಂಡಿಯಲ್ಲಿ ಸಿಕ್ಕ ಮಗು ಎರಡು ವರ್ಷದ ಹೆಣ್ಣು ಮಗು ಅನ್ನೂದು ಗೊತ್ತಾಗಿದ್ದು ಕೂಡಲೆ ಸ್ಥಳೀಯರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ರು. ಹೀಗಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಗುವಿನ ಮೃತದೇಹ ಪರಿಶೀಲನೆ ನಡೆಸಿದ್ದು ದೇಹದ ಮೇಲೆ ಯಾವುದೆ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಹೀಗಾಗಿ ಮಗುವಿನದ್ದು ಕೊಲೆಯೋ ಅಸಹಜ ಸಾವೋ ಅಥವಾ ಬೇರೆ ಕಡೆಯಿಂದ ಯಾರಾದ್ರು ತಂದು ಬಿಸಾಡಿ ಹೋದ್ರಾ ಅನ್ನೂ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೊತೆಗೆ ಅಕ್ಕ ಪಕ್ಕದ ಗ್ರಾಮ ಹಾಗೂ ಠಾಣೆಗಳಲ್ಲಿ ಮಗು ಮಿಸ್ಸಿಂಗ್ ಕೇಸ್ ಏನಾದ್ರು ದಾಖಲಾಗಿದೆಯ ಅನ್ನೂ ಮಾಹಿತಿಯನ್ನು ಪೊಲೀಸರು ಕಲೆ ಹಾಕ್ತಿದ್ದಾರೆ. ಮಗುವಿನ ಮೃತದೇಹ ಕಾಲುವೆಯಲ್ಲಿ ಸಿಕ್ಕಿರುವುದನ್ನ ಕಂಡು ಸ್ಥಳೀಯರು ಸಹ ಶಾಕ್ ಆಗಿದ್ದು ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.