ಗೋಕರ್ಣ: ಪುರಾಣ ಪ್ರಸಿದ್ದ ಗೋಕರ್ಣ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶುಕ್ರವಾರ ಮುಂಜಾನೆಯಿಂದಲೇ ಮುತ್ತೈದೆಯರು ಇಲ್ಲಿನ ಭದ್ರಕಾಳಿ, ತಾಮ್ರಗೌರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಭದ್ರಕಾಳಿ ದೇವಾಲಯದಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ ವಿಶೇಷ ಪೂಜೆ ನೆರವೇರಿತು. ಮಂದಿರದ ಆವಾರದಲ್ಲಿ ಭಕ್ತರಿಂದ ಅಹೋರಾತ್ರಿ ಭಜನೆ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಇನ್ನೂ ತಾಮ್ರಗೌರಿ ದೇವಾಲಯಕ್ಕೆ ಬಂದ ಮುತ್ತೈದೆಯರಿಗೆ ಅರಶಿನ ಕುಂಕುಮ ವಿನಿಮಯದೊಂದಿಗೆ ಬಾಗಿನ ನೀಡಲಾಯಿತು.
ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ದು, ವಿವಿಧ ಭಕ್ಷಗಳ ನೈವೇದ್ಯದೊಂದಿಗೆ ವಿಶೇಷ ಪೂಜೆ ಮಾಡಿ ಲಕ್ಷ್ಮೀಯನ್ನು ಆರಾಧಿಸಲಾಯಿತು. ಹಲವೆಡೆ ಮಹಿಳೆಯರಿಂದ ಕುಂಕುಮಾರ್ಚನೆ, ದೇವಿ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.
ದೇವಾಲಯಕ್ಕೆ ಪೂಜೆಗೆ ತೆರಳುವ ಮುತ್ತೈದೆಯರು ದಾರಿಯಲ್ಲಿ ಪರಸ್ಪರ ಭೇಟಿಯೊಂದಿಗೆ ಅರಿಶಿನ ಕುಂಕುಮ ವಿನಿಮಯ ಮಾಡಿಕೊಳ್ಳುತ್ತಾ ಹಬ್ಬದ ಶುಭಾಶಯ ಕೋರುತ್ತಿರುವ ದೃಶ್ಯ ಕಂಡು ಬಂತು. ಶ್ರಾವಣ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬ ಪವಿತ್ರ ಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಯಿತು.