ಯಾರಾಗಲಿದ್ದಾರೆ ಮಧ್ಯ ಪ್ರದೇಶ ಸಿಎಂ? ಶಿವರಾಜ್ ಸಿಂಗ್ ಚೌಹಾಣ್ ಭೇಟಿಯಾದ ಸಿಂಧಿಯಾ

ಭೋಪಾಲ್, ಡಿಸೆಂಬರ್ 3: ಮಧ್ಯ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ಹೊತ್ತಿನಲ್ಲಿ ಪೂರ್ಣವಾಗಿ ಪ್ರಕಟವಾಗಲಿದ್ದು, ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ಬಹುತೇಕ ದೃಢಪಟ್ಟಿದೆ. ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮದಲ್ಲಿದ್ದಾರೆ. ಫಲಿತಾಂಶದ ಜೊತೆ ಜೊತೆಗೇ ರಾಜಕೀಯ ಚಟುವಟಿಕೆಗಳು ಕೂಡ ಬಿರುಸುಗೊಂಡಿವೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಾರಿ ಬಿಜೆಪಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರ ಹೆಸರನ್ನೂ ಮುಂದಿಟ್ಟಿಲ್ಲ. ಫಲಿತಾಂಶದ ನಂತರವೇ ಸಿಎಂ ಆಯ್ಕೆ ಮಾಡಲಾಗವುದು ಎಂದು ಹೇಳಿತ್ತು. ಹೀಗಾಗಿ ಇದೀಗ ಊಹಾಪೋಹಗಳು ಪ್ರಾರಂಭವಾಗಿವೆ.

ಚುನಾವಣೆ ಬಿಜೆಪಿಗೆ ಕಷ್ಟಕರವಾಗಿ ಕಂಡುಬಂದಿದ್ದರಿಂದ ಕೈಲಾಸ್​ ವಿಜಯವರ್ಗಿಯರಿಂದ ಹಿಡಿದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ವರೆಗೆ ಪಕ್ಷವು ಹಿರಿಯ ಮುಖಂಡರನ್ನು ಕಣಕ್ಕಿಳಿಸಿತ್ತು. ಸಿಂಧಿಯಾ ಮತ್ತು ಶಿವರಾಜ್ ಅವರೇ ಹಲವು ಸಭೆಗಳನ್ನು ನಡೆಸಿದ್ದರು ಮತ್ತು ಪಿಎಂ ಮೋದಿ ಅವರು ನಿರಂತರವಾಗಿ ರಾಜ್ಯದಲ್ಲಿ ಸಮಾವೇಶಗಳಲ್ಲಿ ಭಾಗಿಯಾಗಿ ಮತಯಾಚಿಸಿದ್ದರು. ಇದೆಲ್ಲದರ ಪರಿಣಾಮ ಚುನಾವಣಾ ಫಲಿತಾಂಶದ ಮೇಲೆ ಉಂಟಾಗಿದ್ದು, ಬಿಜೆಪಿಗೆ ಪ್ರಯೋಜನವಾಗಿದೆ.

ಇದೀಗ ಸಿಂಧಿಯಾ ಅವರು ಚೌಹಾಣ್ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

2018ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿಯ ಪೈಪೋಟಿ ಏರ್ಪಟ್ಟು ಸರಳ ಬಹುಮತಕ್ಕೆ ಕೆಲವೇ ಸ್ಥಾನಗಳು ಕಾಂಗ್ರೆಸ್​ಗೆ ಕಡಿಮೆಯಾಗಿದ್ದವು. ನಂತರ ಪಕ್ಷೇತರರು ಹಾಗೂ ಇತರರ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು. ಆದರೆ, ಇದಾದ ಒಂದೂವರೆ ವರ್ಷದಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯವೆದ್ದು, ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ನಂತರ ಬಿಜೆಪಿ ಸರ್ಕಾರ ರಚನೆಯಾಗಿ ಪುನಃ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಆಗಿದ್ದರು.

ಈ ಬಾರಿ ಬಿಜೆಪಿಯು ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಸಿಎಂ ಹುದ್ದೆಯ ರೇಸ್​ನಲ್ಲಿ ಚೌಹಾಣ್, ಸಿಂಧಿಯಾ ಸೇರಿ ಹಲವರ ಹೆಸರು ಕೇಳಿಬರುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ.