ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ಡಿಸೆಂಬರ್ 3 ರಂದು ನಮ್ಮ ಬೆಂಗಳೂರಿನಲ್ಲಿ ನಡೆಯಲ್ಲಿದೆ. ಈ ಹಿಂದೆ ನಡೆದ ಏಕದಿನ ವಿಶ್ವಕಪ್ನಲ್ಲಿ ಐದು ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಇನ್ನು ಈ ಸರಣಿಯನ್ನು ಈಗಾಗಲೇ 3-1 ಅಂತರದಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾಕ್ಕೆ ಈ ಪಂದ್ಯ ಕೇವಲ ಔಪಚಾರಿಕವಾಗಿದ್ದರೆ, ಕೊನೆಯ ಪಂದ್ಯವನ್ನು ಗೆದ್ದು ಸರಣಿ ಸೋಲಿನ ಮುಜುಗರವನ್ನು ಕೊಂಚ ಕಡಿಮೆ ಮಾಡಿಕೊಳ್ಳುವ ಇರಾದೆಯಲ್ಲಿ ಕಾಂಗರೂ ಪಡೆ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ವರದಿ
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ ಒಟ್ಟು 7 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಾಗಿದ್ದು, ಈ ಪೈಕಿ ಭಾರತ 5 ಪಂದ್ಯಗಳನ್ನು ಆಡಿದೆ. ಉಳಿದಂತೆ ಈ ಮೈದಾನದಲ್ಲಿ ಕ್ರಿಕೆಟ್ ಮೂರು ಸ್ವರೂಪದಲ್ಲಿ 5 ಪಂದ್ಯಗಳನ್ನು ಗೆದ್ದಿರುವ ಭಾರತ, 3 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಇನ್ನು ಈ ಮೈದಾನದಲ್ಲಿ ಉಭಯ ತಂಡಗಳ ಮುಖಾಮುಖಿ ನೋಡುವುದಾದರೆ 2019 ರಲ್ಲಿ ಎರಡೂ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ಆಸ್ಟ್ರೇಲಿಯಾ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ಎಂ ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಕುರಿತು ಮಾತನಾಡುವುದಾದರೆ.. ಇಲ್ಲಿನ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹಾಗೆಯೇ ಸ್ಪಿನ್ ಬೌಲರ್‌ಗಳಿಗೆ ಸಾಕಷ್ಟು ನೆರವು ದೊರೆಯಲಿದೆ. ಮಳೆ ಬಂದರೆ ಔಟ್ ಫೀಲ್ಡ್ ಕೂಡ ನಿಧಾನವಾಗುವುದರಿ.ದ ಇದು ಬೌಲರ್‌ಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವುದು ಉತ್ತಮ.
ಹವಾಮಾನ ವರದಿ
AccuWeather ಪ್ರಕಾರ, ಡಿಸೆಂಬರ್ 3 ರಂದು ಪಂದ್ಯದ ದಿನದಂದು ಬೆಂಗಳೂರಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಶೇಕಡಾ 55 ರಷ್ಟು ಮಳೆಯೊಂದಿಗೆ, ಗಾಳಿಯು ವೇಗವೂ ಗಂಟೆಗೆ 23 ಕಿಮೀ ಇರಲಿದೆ. ಗರಿಷ್ಠ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಇರುತ್ತದೆ.
ಉಭಯ ತಂಡಗಳು
ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ಆವೇಶ್ ಖಾನ್ , ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯ್.
ಆಸ್ಟ್ರೇಲಿಯಾ ತಂಡ: ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ದ್ವಾರಹುಸಿ, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್ಸನ್.