ಹುಬ್ಬಳ್ಳಿ ಡಿ.02: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಧಾರವಾಡ ಜಿಲ್ಲೆಯ ಗ್ರಾಮಗಳ ಅಭಿವೃದ್ಧಿ ಕುಂಟಿತವಾಗುತ್ತಿದೆ. ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳಿಗೆ ಪಿಡಿಒಗಳೇ ಇಲ್ಲ. ಪಿಡಿಒ ನೇಮಕಾತಿಗಳನ್ನು ತ್ವರಿತಗೊಳಿಸುವಂತೆ ಗ್ರಾಮ ಪಂಚಾಯಿತಿಗಳಿಂದ ಸರಕಾರಕ್ಕೆ ಒತ್ತಾಯಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಶಿಕ್ಷಣ, ಆರೋಗ್ಯ, ವಿದ್ಯುತ್, ಗ್ರಾಮೀಣ ವಸತಿ, ಕುಡಿಯುವ ನೀರು, ಸ್ವಚ್ಛತೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ನೀರಿನ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯ ವಿವಿಧ ಸಮಾಜ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು, ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಅಗತ್ಯ.
ಧಾರವಾಡ ಜಿಲ್ಲೆಯಲ್ಲಿ 145 ಜಿ.ಪಂ
ಧಾರವಾಡ ತಾಲೂಕಿನ ಮಾರಡಗಿ ಮತ್ತು ತಡಕೋಡ, ಕುಂದಗೋಳ ತಾಲೂಕಿನ ಭಾರದವಾಡ, ದೇವನೂರು, ಗುಡಗೇರಿ, ಗುಡೇನಕಟ್ಟಿ, ಹಿರೇಗುಂಜಲ್ಲ, ಹಿರೇನರ್ತಿ, ಮಳಲಿ, ಕಮಡೊಳ್ಳಿ, ಕುಬಿಹಾಳ, ಮತ್ತಿಗಟ್ಟಿ, ರೊಟ್ಟಿಗವಾಡ, ಯರೇಬೂದಿಲ, ನವಲಗುಂದ ತಾಲೂಕಿನ ಕಳವಾಡ, ತಡಹಾಳ್, ಹೆಬ್ಬಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಇಲ್ಲ. ಈ ಕೊರತೆ ನೀಗಿಸಲು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಒಬ್ಬ ಪಿಡಿಒಗೆ ಎರಡರಿಂದ ಮೂರು ಪಂಚಾಯಿತಿಗಳ ಪ್ರಭಾರ ನೀಡಲಾಗಿದೆ. ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಸರ್ಕಾರಕ್ಕೆ ಮನವಿ ಮಾಡಿದೆ.
ಮತ್ತಿಗಟ್ಟಿ ಜಿ.ಪಂ.ಅಧ್ಯಕ್ಷ ಸುಭಾಶ್ ಅಂಗಡಿ ಮಾತನಾಡಿ, ಎರಡು ಪಂಚಾಯಿತಿಗೆ ಒಬ್ಬ ಪಿಡಿಒ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಿಡಿಒಗೆ ಮತ್ತೊಂದು ಪಂಚಾಯಿತಿಯ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಸರ್ಕಾರ ಶೀಘ್ರವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ ಮಾತನಾಡಿ, ಜಿಲ್ಲೆಗೆ ಪಿಡಿಒಗಳನ್ನು ನೀಡುವಂತೆ ಈಗಾಗಲೇ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇವೆ. ಶೀಘ್ರವೇ ಸರಕಾರ ಆದೇಶ ಹೊರಡಿಸಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಜಿಪಂ ಉಪಕಾರ್ಯದರ್ಶಿ ಬಿ.ಎಸ್.ಮುಗನೂರಮಠ ಮಾತನಾಡಿ, ಎರಡು ಗ್ರಾಮ ಪಂಚಾಯಿತಿಗಳಿಗೆ ಒಬ್ಬ ಪಿಡಿಒ ಅನ್ನು ನಿಯೋಜನೆ ಮಾಡಿರುವ ನಿದರ್ಶನಗಳಿವೆ. ರಾಜ್ಯ ಸರಕಾರ ವರ್ಗಾವಣೆ ಆದೇಶ ನೀಡುವ ಪ್ರಕ್ರಿಯೆ ಆರಂಭಿಸಿದೆ. ಶೀಘ್ರವೇ ಖಾಲಿ ಇರುವ ಎಲ್ಲ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.