ಟೀಂ ಇಂಡಿಯಾ ಈ ವರ್ಷ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ. 2023 ರ ವಿಶ್ವಕಪ್‌ನ ಫೈನಲ್‌ನಲ್ಲಿನ ಸೋಲನ್ನು ಹೊರತುಪಡಿಸಿ, ಟೀಂ ಇಂಡಿಯಾ ಈ ವರ್ಷ ಆಸ್ಟ್ರೇಲಿಯಾದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಸದ್ಯ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲೂ ಟೀಂ ಇಂಡಿಯಾ 3-1 ಅಂತರದ ಮುನ್ನಡೆ ಸಾಧಿಸಿದೆ. ಸರಣಿಯ ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಮಾಡುವ ಹೊಸ್ತಿಲಿನಲ್ಲಿದೆ.
ಭಾರತದ ಐತಿಹಾಸಿಕ ಸಾಧನೆ
ಟೀಂ ಇಂಡಿಯಾ 2023 ರಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇದುವರೆಗೆ 17 ಪಂದ್ಯಗಳನ್ನು ಆಡಿದೆ. ಈ ಪೈಕಿ 9 ಪಂದ್ಯಗಳನ್ನು ಗೆದ್ದಿರುವ ಭಾರತ ಒಂದು ವರ್ಷದಲ್ಲಿ ಆಸ್ಟ್ರೇಲಿಯಾವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಸೋಲಿಸಿದ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮೊದಲು 2013ರಲ್ಲಿ ಟೀಂ ಇಂಡಿಯಾ 8 ಬಾರಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಹಾಗೆಯೇ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ಪಂದ್ಯಗಳನ್ನು ಗೆದ್ದಿತ್ತು.
ಮೂರೂ ಮಾದರಿಯಲ್ಲಿ ಭಾರತದ ಪ್ರದರ್ಶನ ಹೀಗಿತ್ತು
ಈ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಒಟ್ಟು 5 ಟೆಸ್ಟ್ ಪಂದ್ಯಗಳು ನಡೆದಿವೆ. ಈ ಪೈಕಿ 2 ಟೆಸ್ಟ್ ಪಂದ್ಯಗಳನ್ನು ಭಾರತ ಗೆದ್ದಿದ್ದು, 2ರಲ್ಲಿ ಮಾತ್ರ ಆಸ್ಟ್ರೇಲಿಯಾ ಗೆದ್ದಿದೆ. ಉಳಿದಂತೆ 1 ಪಂದ್ಯ ಡ್ರಾ ಆಗಿತ್ತು. ಏಕದಿನ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಈ ವರ್ಷ ಎರಡೂ ತಂಡಗಳು 8 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ವಿಶೇಷವೆಂದರೆ ಉಭಯ ತಂಡಗಳು ತಲಾ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಅದೇ ಸಮಯದಲ್ಲಿ, ಈ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4 ಟಿ20 ಪಂದ್ಯಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ 3ರಲ್ಲಿ ಗೆದ್ದಿದ್ದು, ಆಸ್ಟ್ರೇಲಿಯಾ 1 ಪಂದ್ಯವನ್ನಷ್ಟೇ ಗೆಲ್ಲಲು ಶಕ್ತವಾಗಿದೆ.
ವರ್ಷದಲ್ಲಿ ಆಸೀಸ್ ವಿರುದ್ಧ ಭಾರತದ ಗೆಲುವಿನ ಸಾಧನೆ
- 2023 ರಲ್ಲಿ 9 ಪಂದ್ಯಗಳಲ್ಲಿ ಗೆಲುವು (ಇನ್ನೊಂದು ಪಂದ್ಯ ಬಾಕಿ ಇದೆ)
- 2013 ರಲ್ಲಿ 8 ಪಂದ್ಯಗಳಲ್ಲಿ ಗೆಲುವು
- 2017 ರಲ್ಲಿ 7 ಪಂದ್ಯಗಳಲ್ಲಿ ಗೆಲುವು
- 1998 ರಲ್ಲಿ 6 ಪಂದ್ಯಗಳಲ್ಲಿ ಗೆಲುವು
- 2008 ರಲ್ಲಿ 6 ಪಂದ್ಯಗಳಲ್ಲಿ ಗೆಲುವು
- 2020 ರಲ್ಲಿ 6 ಪಂದ್ಯಗಳಲ್ಲಿ ಗೆಲುವು
ಈ ದಾಖಲೆ ಸರಿಗಟ್ಟುವ ಅವಕಾಶ
ಉಭಯ ತಂಡಗಳ ನಡುವಿನ ಸರಣಿಯ ಐದನೇ ಮತ್ತು ಕೊನೆಯ ಪಂದ್ಯ ಡಿಸೆಂಬರ್ 3 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ತನ್ನ ಸ್ವಂತ ದಾಖಲೆಯನ್ನು ಸರಿಗಟ್ಟುತ್ತದೆ. ಇದಕ್ಕೂ ಮುನ್ನ ಟೀಂ ಇಂಡಿಯಾ 2016ರಲ್ಲಿ 4 ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.