ಗೋಕರ್ಣ: ಪ್ರೀತಿ ಹೃದಯಗಳನ್ನು ಹತ್ತಿರ ತಂದರೆ, ಕೋಪ ಹೃದಯಗಳನ್ನು ದೂರ ಮಾಡುತ್ತದೆ. ಜೀವ- ಜೀವಗಳನ್ನು, ಜೀವ- ದೇವರನ್ನೂ ದೂರ ಮಾಡುವಂಥದ್ದು. ಅರಿಷಡ್ವರ್ಗಗಳಲ್ಲಿ ಒಂದಾದ ಕ್ರೋಧ ಮನಸ್ಸುಗಳ ಮಧ್ಯೆ, ಹೃದಯಗಳ ಮಧ್ಯೆ ಗೋಡೆ ಕಟ್ಟುವ ಕೆಲಸ ಮಾಡುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಭಾವ, ಪ್ರೀತಿ ಬೆಳೆದಂತೆ ಭಾಷೆ ಮೂಕವಾಗುತ್ತದೆ. ಭಾವ ಉಕ್ಕಿ ಬಂದಾಗ ಕಂಠ ಗದ್ಗದವಾಗುತ್ತದೆ. ಹೃದಯ ಹೃದಯಗಳನ್ನು ಬೆಸೆಯಲು ಪ್ರೀತಿ ಅಗತ್ಯ ಎಂದು ಬಣ್ಣಿಸಿದರು.
ಕೋಪ ನಮ್ಮ ನಿಯಂತ್ರಣದಲ್ಲಿದ್ದಾಗ ಅದು ಒಳ್ಳೆಯ ಗುಣ. ಆದರೆ ಬಹುತೇಕ ಕೋಪವೇ ಎಲ್ಲರನ್ನೂ ನಿಯಂತ್ರಿಸುತ್ತಿರುತ್ತದೆ. ಇದೇ ಸಮಸ್ಯೆಗೆ ಮೂಲ ಎಂದು ವಿಶ್ಲೇಷಿಸಿದರು. ಕೋಪ ಬಂದಾಗ ಕೂಗಾಡುವುದು ಏಕೆ ಎಂದು ಗುರುವೊಬ್ಬರು ತಮ್ಮ ಶಿಷ್ಯರನ್ನು ಪ್ರಶ್ನಿಸುತ್ತಾರೆ. ಅದರೆ ಇದಕ್ಕೆ ಸಮರ್ಪಕ ಉತ್ತರ ಯಾರಿಂದಲೂ ದೊರಕಲಿಲ್ಲ. ಕೊನೆಗೆ ಗುರುಗಳೇ ಅದಕ್ಕೆ ಹೀಗೆ ಉತ್ತರ ನೀಡುತ್ತಾರೆ. ಕೋಪ ಬರುತ್ತಿದ್ದಂತೇ ಹೃದಯಗಳು ದೂರವಾಗುತ್ತವೆ. ದೇಹ ಹತ್ತಿರವಿದ್ದರೂ ಜೀವ ದೂರ ಇರುತ್ತದೆ. ಆದ್ದರಿಂದ ಜೋರಾಗಿ ಕೂಗಾಡುತ್ತೇವೆ. ಅಂತೆಯೇ ಪ್ರೀತಿ ಬಂದರೆ ಮೆಲುವಾಗಿ, ಮೃದುವಾಗಿ ಮಾತನಾಡುತ್ತೇವೆ. ಪ್ರೀತಿ ಅತಿಯಾದಾಗ ಹೃದಯ- ಹೃದಯಗಳ ನಡುವೆ ಎಲ್ಲ ಸಂವಹನ ನಡೆಯುತ್ತದೆ. ಅದಕ್ಕೆ ಮಾತಿನ ಅಥವಾ ಯಾವ ಮಾಧ್ಯಮದ ಅಗತ್ಯವೂ ಇರುವುದಿಲ್ಲ ಎಂದು ವಿವರಿಸಿದರು.
ಶ್ರೀರಾಮ ತಾರಕ ಹವನ, ರುದ್ರಹವನ ಹಾಗೂ ಚಂಡೀ ಪಾರಾಯಣ ನಡೆಯಿತು. ಭಂಡಾರಿ ಸಮಾಜದವರಿಂದ ಪಂಚವಾದ್ಯ ಸೇವೆ ನೆರವೇರಿಸಲಾಯಿತು. ಹೊಸನಗರದ ಮಾಜಿ ಶಾಸಕ ಸ್ವಾಮಿರಾವ್ ಅವರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ರಾಜ್ಯಸ್ತರೀಯ ಜ್ಯೋತಿಷ್ಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಗಜಾನನ ಮಂಜುನಾಥ ಭಟ್ಟ್ ಅವರನ್ನು ಶ್ರೀಗಳು ಸನ್ಮಾನಿಸಿದರು.