81 ಕೋಟಿ ಬಡವರಿಗೆ ಉಚಿತ ಪಡಿತರ ವಿತರಣೆ; 5 ವರ್ಷ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ, ನವೆಂಬರ್ 29: ದೇಶದೆಲ್ಲೆಡೆ 80 ಕೋಟಿಗೂ ಹೆಚ್ಚು ಬಡ ಜನರಿಗೆ ಪಡಿತರ ವಿತರಣೆ ಮಾಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮತ್ತಷ್ಟು 5 ವರ್ಷಕ್ಕೆ ಮುಂದುವರಿಸುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ಅನುರಾಗ್ ಠಾಕೂರ್ ನವೆಂಬರ್ 29, ಬುಧವಾರದಂದು ಈ ವಿಷಯ ತಿಳಿಸಿದ್ದಾರೆ. ಗರೀಬ್ ಕಲ್ಯಾಣ್ ಅನ್ನ ಯೋಜನೆ 2028ರವರೆಗೂ ಲಭ್ಯ ಇರುತ್ತದೆ. ಸದ್ಯ ಈ ಯೋಜನೆ ಡಿಸೆಂಬರ್ 31ಕ್ಕೆ ಮುಗಿಯುತ್ತದೆ. ಜನವರಿ 1ರಿಂದ ಈ ಸ್ಕೀಮ್ ಹಾಗೇ ಮುಂದುವರಿಯುತ್ತದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಪ್ರತೀ ತಿಂಗಳು 5 ಕಿಲೋನಷ್ಟು ಆಹಾರಧಾನ್ಯಗಳನ್ನು ಉಚಿತವಾಗಿ ಕೊಡಲಾಗುತ್ತದೆ. ಈ ಯೋಜನೆಯಲ್ಲಿ 80 ಕೋಟಿ ಫಲಾನುಭವಿಗಳಿದ್ದಾರೆ. ಈ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವುದಾಗಿ ಸರ್ಕಾರ ಈ ಹಿಂದೆಯೇ ಸುಳಿವು ನೀಡಿತ್ತು. ಹೀಗಾಗಿ, ಸಂಪುಟದ ಅನುಮೋದನೆ ನಿರೀಕ್ಷಿತವೇ ಆಗಿದೆ.

ಮುಂದಿನ 5 ವರ್ಷ ಪಿಎಂಜಿಕೆಎವೈ ಸ್ಕೀಮ್​ನಿಂದ ಸರ್ಕಾರಕ್ಕೆ ಆಗುವ ವೆಚ್ಚ 11.8 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಹಿಂದೆ ಆಹಾರ ಭದ್ರತಾ ಕಾಯ್ದೆ ಅಡಿಯ ಪಡಿತರ ಯೋಜನೆ ಅಸ್ತಿತ್ವದಲ್ಲಿತ್ತು. ಅದರ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಪ್ರತೀ ತಿಂಗಳು 5 ಕಿಲೋ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿತ್ತು.

ಆದರೆ, 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡವರಿಗೆಂದು ಹೆಚ್ಚುವರಿಯಾಗಿ 5 ಕಿಲೋ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸುವ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಆರಂಭಿಸಿತು. 2022ರ ಡಿಸೆಂಬರ್​ನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಗರೀಬ್ ಅನ್ನ ಯೋಜನೆಯನ್ನು ತಂದಿದ್ದು, ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡುವ ಕೇಂದ್ರ ಈ ಯೋಜನೆ ವಿಶ್ವಾದ್ಯಂತ ಬಹಳ ದೇಶಗಳಿಗೆ ಮೆಚ್ಚುಗೆ ಆಗಿದೆ.

ಬೇರೆ ಯೋಜನೆಗಳಿಗೂ ಕ್ಯಾಬಿನೆಟ್ ಅನುಮೋದನೆ

  • ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್​ಗಳನ್ನು ಒದಗಿಸುವ ಯೋಜನೆ
  • ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್​ಗಳ ಯೋಜನೆ ಮುಂದಿನ ಮೂರು ವರ್ಷ ಮುಂದುವರಿಕೆ
  • 16ನೆ ಹಣಕಾಸು ಅಯೋಗದ ನಿಬಂಧನೆಗಳು
  • ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್