ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಲ್ಲೋಲ-ಕಲ್ಲೋಲ?: ಅನ್​ಫಾಲೋ ಮಾಡಿದ ಜಸ್​ಪ್ರಿತ್ ಬುಮ್ರಾ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್​ನಿಂದ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎರಡು ಸೀಸನ್​ಗಳ ನಂತರ ಪಾಂಡ್ಯ ಮರಳಿ ಎಂಐ ಟೀಮ್ ಸೇರಿದ್ದು, ಐಪಿಎಲ್ 2024 ರಲ್ಲಿ ರೋಹಿತ್ ತಂಡದಲ್ಲಿ ಆಡಲಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿದ ಬೆನ್ನಲ್ಲೇ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹಾರ್ದಿಕ್ ಕರೆತಂದ ಮುಂಬೈ ಫ್ರಾಂಚೈಸಿ ಮೇಲೆ ಅವರದ್ದೇ ತಂಡದ ಆಟಗಾರರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ, ‘ಕೆಲವೊಮ್ಮೆ ಮೌನವು ಅತ್ಯುತ್ತಮ ಉತ್ತರವಾಗಿದೆ’ ಎಂದು ಬರೆದಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಮರಳುವುದರೊಂದಿಗೆ ಬುಮ್ರಾ ಈರೀತಿ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ ಎಂದು ಜನರು ಲಿಂಕ್ ಮಾಡುತ್ತಿದ್ದಾರೆ.

ಇದಿಷ್ಟೆ ಅಲ್ಲದೆ ಇನ್​ಸ್ಟಾ ಮತ್ತು ಎಕ್ಸ್ (ಟ್ವಿಟ್ಟರ್) ನಲ್ಲಿ ಮುಂಬೈ ಇಂಡಿಯನ್ಸ್ ಖಾತೆಯನ್ನು ಅನ್ ಫಾಲೋ ಮಾಡಿದ್ದಾರೆ. ಅಭಿಮಾನಿಗಳು ಹೇಳುವ ಪ್ರಕಾರ, ಪಾಂಡ್ಯ ಮುಂಬೈ ತಂಡಕ್ಕೆ ಮರಳಿರುವುದು ಬುಮ್ರಾಗೆ ದೊಡ್ಡ ನಷ್ಟ ಉಂಟುಮಾಡಬಹುದು. ಏಕೆಂದರೆ ರೋಹಿತ್ ನಂತರ ಬುಮ್ರಾ ಅವರನ್ನು ಮುಂಬೈ ತಂಡದ ನಾಯಕ ಎಂದು ಪರಿಗಣಿಸಲಾಗಿತ್ತು. ಆದರೆ, ಈ ಜಾಗಕ್ಕೆ ಪಾಂಡ್ಯ ಸ್ಪರ್ಧಿಯಾಗಿದ್ದಾರೆ.

ಅಲ್ಲದೆ ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಸೇರಿಸಿಕೊಳ್ಳುವ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರನ್ನು ಕೇಳಲಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ. ಮುಂಬೈ ಇಂಡಿಯನ್ಸ್, ಭವಿಷ್ಯದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಪರಿಗಣಿಸುತ್ತಿದೆ ಎಂಬ ಊಹಾಪೋಹವೂ ಇದೆ. ಐಪಿಎಲ್ 2024 ರಲ್ಲಿ ನಾಯಕರಾಗುತ್ತಾರೆಯೇ ಎಂಬ ಬಗ್ಗೆ ಅಧಿಕೃತ ಉತ್ತರವಿಲ್ಲ. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಹಾರ್ದಿಕ್ ಗುಜರಾತ್ ನಾಯಕರಾಗಿದ್ದರು. ಮೊದಲ ಋತುವಿನಲ್ಲಿ ಚಾಂಪಿಯನ್ ಆದರೆ, ಕೊನೆಯ ಸೀಸನ್’ನಲ್ಲಿ ಫೈನಲ್ ತಲುಪಿತ್ತು.