ಆರ್​ಸಿಬಿ ಸೇರಿದ ತಕ್ಷಣ ಸ್ಫೋಟಕ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಹೇಳಿದ್ದೇನು ಗೊತ್ತೇ?

ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜಿಗೂ ಮುನ್ನ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್​ನಿಂದ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಇದೀಗ ಜಿಟಿ ಶುಭ್​ಮನ್ ಗಿಲ್ ಅವರಿಗೆ ನಾಯಕತ್ವದ ಪಟ್ಟ ನೀಡಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮುಂಬೈ ತಂಡದಲ್ಲಿದ್ದ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿ ಮಾಡಿದೆ. ಇದರ ಬೆನ್ನಲ್ಲೇ ಆರ್​ಸಿಬಿ ಪರ ಆಡುವ ಉತ್ಸಾಹವನ್ನು ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಕ್ಯಾಮರೂನ್ ಗ್ರೀನ್ ಮಾತನಾಡಿರುವ ವಿಡಿಯೋ ಹಂಚಿಕೊಂಡಿದೆ. “ಹೇ ಆರ್​ಸಿಬಿ ಅಭಿಮಾನಿಗಳೇ, ನಾನು ಕ್ಯಾಮ್ ಗ್ರೀನ್, ನಾನು ಆ್ಯಂಡಿ ಫ್ಲವರ್ (ತಂಡದ ಮುಖ್ಯ ಕೋಚ್) ಜೊತೆ ಆರ್​ಸಿಬಿ ತಂಡ ಸೇರಲು ಉತ್ಸುಕನಾಗಿದ್ದೇನೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಮ್ಮನ್ನು ನೋಡಲು ಕಾತುರನಾಗಿದ್ದೇನೆ, ಚೀಯರ್ಸ್,” ಎಂದು ಆರ್​ಸಿಬಿಯ ವಿಡಿಯೋದಲ್ಲಿ ಗ್ರೀನ್ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಮರೂನ್ ಗ್ರೀನ್ ಅವರನ್ನು ಬರೋಬ್ಬರಿ 17.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಐಪಿಎಲ್ 2023 ರಲ್ಲಿ 16 ಪಂದ್ಯಗಳನ್ನು ಆಡಿದ ಆಸ್ಟ್ರೇಲಿಯ ಆಟಗಾರ ಭರ್ಜರಿ ಪ್ರದರ್ಶನ ತೋರಿದ್ದರಯ. 452 ರನ್ ಗಳಿಸಿದ್ದಲ್ಲದೆ, ಅಜೇಯ ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಜೊತೆಗೆ ಆರು ವಿಕೆಟ್‌ಗಳನ್ನು ಪಡೆದಿದ್ದರು.

ಒಟ್ಟಾರೆಯಾಗಿ ಗ್ರೀನ್ ಅವರು 37 ಟಿ20I ಪಂದ್ಯಗಳನ್ನು ಆಡಿದ್ದು, 29.04 ರ ಸರಾಸರಿಯಲ್ಲಿ 697 ರನ್ ಗಳಿಸಿದ್ದಾರೆ, 151 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ ಇದೆ. 100* ರ ಅತ್ಯುತ್ತಮ ಸ್ಕೋರ್‌ನೊಂದಿಗೆ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. 2/16 ರ ಅತ್ಯುತ್ತಮ ಅಂಕಿಅಂಶಗಳೊಂದಿಗೆ 11 ವಿಕೆಟ್‌ಗಳನ್ನು ಪಡೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹರಾಜಿಗೂ ಮುನ್ನ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಮತ್ತು ಭಾರತದ ವೇಗಿ ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಇತರ ಆಟಗಾರರಲ್ಲಿ ನ್ಯೂಝಿಲೆಂಡ್ ಆಟಗಾರರಾದ ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವೇಯ್ನ್ ಪಾರ್ನೆಲ್, ಇಂಗ್ಲೆಂಡ್‌ನ ಡೇವಿಡ್ ವಿಲ್ಲಿ ಮತ್ತು ಭಾರತದ ಆಟಗಾರರಾದ ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್ ಮತ್ತು ಕೇದಾರ್ ಜಾಧವ್ ಕೂಡ ಸೇರಿದ್ದಾರೆ. ಇದರ ಜೊತೆಗೆ ಆರ್​ಸಿಬಿ ಫ್ರಾಂಚೈಸಿ ಆಲ್‌ರೌಂಡರ್ ಮಯಾಂಕ್ ದಾಗರ್‌ಗೆ ಬದಲಾಗಿ ಸನ್‌ರೈಸರ್ಸ್ ಹೈದರಾಬಾದ್‌ಗೆ ತಮ್ಮ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಅನ್ನು ವ್ಯಾಪಾರ ಮಾಡಿದೆ.