ಬೆಳಗಾವಿ ನ.28: ಡಿಸೆಂಬರ್ 4 ರಿಂದ 15 ರವರೆಗೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಹೇಳಿದರು. ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಿಧಾನಮಂಡಲ ಅಧಿವೇಶನಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
12 ಜನ ಎಸ್ಪಿ, 42 ಡಿವೈಎಸ್ಪಿಗಳು ಮತ್ತು 100 ಜನ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮತ್ತು ಪೊಲೀಸ್ ಸಿಬ್ಬಂದಿಗೆ ವಸತಿ ಕಲ್ಪಿಸಲು ಒಟ್ಟು 15 ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ವೆಚ್ಚ ತಗ್ಗಿಸಲು ಕ್ರಮ
ಚಳಿಗಾಲದ ಅಧಿವೇಶನದ ವೆಚ್ಚ ಕಡಿಮೆ ಮಾಡಲು ಜಿಲ್ಲಾಡಳಿತ ಕಸರತ್ತು ನಡೆಸಿದೆ. ಕಳೆದ ವರ್ಷ 17.50 ಕೋಟಿ ರೂ. ವೆಚ್ಚವಾಗಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ಮಾಡುವ ಗುರಿ ನೀಡಲಾಗಿದೆ. ಅಧಿವೇಶನದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದೇ ಸೌಧದಲ್ಲಿ 2012ರಲ್ಲಿ ನಡೆದ ಮೊದಲ ಅಧಿವೇಶನಕ್ಕೆ 7.39 ಕೋಟಿ ರೂ. ವೆಚ್ಚವಾದರೆ, 2022ರ ಅಧಿವೇಶನಕ್ಕೆ 17.50 ಕೋಟಿ ರೂ. ವೆಚ್ಚವಾಗಿತ್ತು. ಬೆಳಗಾವಿಯಲ್ಲಿ ಈವರೆಗೆ ನಡೆದಿರುವ 11 ಅಧಿವೇಶನಗಳಿಗೆ ಬರೋಬ್ಬರಿ 131.3 ಕೋಟಿ ವೆಚ್ಚವಾಗಿದೆ.