ಕೂಲಿ ಮಾಡಿ ಪಿಗ್ಮಿ ಕಟ್ಟಿದ್ದ ಬಡ ಕುಟುಂಬಗಳಿಗೆ ಪಂಗನಾಮ, ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋದ ಬೀದಿ ವ್ಯಾಪಾರಿಗಳು

ಅವರೆಲ್ಲಾ ಬೀದಿ ಬದಿ ವ್ಯಾಪಾರ, ಕೂಲಿ ಮಾಡಿಕೊಂಡು ಬಂದ ಹಣದಿಂದ ಜೀವನ ಸಾಗಿಸಿ ಅದರಲ್ಲಿ ಉಳಿದ ಹಣವನ್ನ ವಾರಕ್ಕೊಮ್ಮೆ ಚೀಟಿ ಕಟ್ಟುತ್ತಿದ್ರು. ಹಬ್ಬದ ಉಳಿತಾಯ ಯೋಜನೆ ಅಂತಾ ಕೂಲಿನಾಲಿ ಮಾಡಿದ್ದ ಹಣವನ್ನ ಪಿಗ್ಮಿಗೆ ಕಟ್ಟಿದ್ರು. ಆದ್ರೆ ಇದೀಗ ಚೀಟಿ ಕಟ್ಟಿಸಿಕೊಂಡ ಭೂಪನೊಬ್ಬ ಬಡ ಜನರ ಚೀಟಿ ಹಣವನ್ನ ಗುಳುಂ ಮಾಡಿದ್ದು, ತಮ್ಮ ಹಣ ವಾಪಸ್ ಪಡೆಯಲು ಜನರು ಪರದಾಡ್ತಿದ್ದಾರೆ. ಕೈಯಲ್ಲಿ ಚೀಟಿ ಕಟ್ಟಿದ್ದ ಕಾರ್ಡ್ ಹಿಡಿದುಕೊಂಡು ಬೇಕೆ ಬೇಕು ನ್ಯಾಯ ಬೇಕು ಅಂತಾ ಪ್ರತಿಭಟನೆ ನಡೆಸುತ್ತಿರೋ ಬಡ ಜನ.. ಚೀಟಿ ಹಣವನ್ನ ಗುಳುಂ ಮಾಡಿರೋ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರೋ ಮಹಿಳೆಯರು… ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಮಂಡಿಬೆಲೆ ರಸ್ತೆಯ ನಿವಾಸಿಗಳಾದ ಇವರು ತಾವು ಉಳಿತಾಯ ಮಾಡಿದ್ದ ಹಣವನ್ನ ಚೀಟಿ ಕಟ್ಟಿ ಮೋಸ ಹೋಗಿದ್ದು, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.

ಅಂದಹಾಗೆ ವಿಜಯಪುರ ಪಟ್ಟಣದ ರವೀಂದ್ರ ಬಾಬು ಎನ್ನುವವರು ವರ ಮಹಾಲಕ್ಷ್ಮೀ ಹಬ್ಬದ ಉಳಿತಾಯ ಯೋಜನೆ ಅಂತಾ ಚೀಟಿ ತೆರೆದಿದ್ದರು. ಪಟ್ಟಣದ ಮಂಡಿಬೆಲೆ ರಸ್ತೆಯ 80 ಜನ ತಾವು ಕೂಲಿ ನಾಲಿ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬಂದ ಹಣದಲ್ಲಿ ಉಳಿತಾಯ ಮಾಡಿ ವಾರಕ್ಕೆ 100 ರೂ 200 ರೂಪಾಯಿ ಹಣವನ್ನು 2022 ರಿಂದಲೂ ಪಿಗ್ಮಿ ಕಟ್ಟಿದ್ದರು. ಆದ್ರೆ ಚೀಟಿ ಮುಗಿದು ಉಳಿತಾಯ ಹಣವನ್ನ ನೀಡಬೇಕಿದ್ದ ಚೀಟಿ ಕಟ್ಟಿಸಿಕೊಂಡಿದ್ದ ರವೀಂದ್ರ ಬಾಬು ಇದೀಗ ಈ ಬಡ ಜನರಿಗೆ ಮಕ್ಮೆಲ್​ ಟೋಪಿ ಹಾಕಿದ್ದಾನೆ.

ಅಂದಹಾಗೆ ಚೀಟಿ ನಡೆಸುತ್ತಿದ್ದ ರವೀಂದ್ರ ಬಾಬು ಈ ಏರಿಯಾದ ವೆಂಕಟೇಶ್ ಎನ್ನುವವರಿಗೆ ವಾರದ ಹಣವನ್ನ ಕಲೆಕ್ಟ್ ಮಾಡು ನಿನಗೆ ಕೊನೆಯಲ್ಲಿ ಒಂದು ಚೀಟಿ ಫ್ರೀ sಯಾಗಿ ಕೊಡುವುದಾಗಿ ಹೇಳಿದ್ನಂತೆ. ಅದರಂತೆ ವೆಂಕಟೇಶ್ ತಮ್ಮ ಏರಿಯಾದಲ್ಲಿ 80 ಮಂದಿ ಬಡಜನರ ಬಳಿ ಉಳಿತಾಯ ಯೋಜನೆ ಪಿಗ್ಮಿ ಚೀಟಿ ಹಾಕಿಸಿದ್ದು ಅದರಲ್ಲಿ 100 ರೂ ನಂತೆ 52 ವಾರ ಹಣವನ್ನ ಕಟ್ಟಿಸಿಕೊಂಡು ಕೊಟ್ಟಿದ್ದಾನೆ.

ಇದೇ ರೀತಿ ವರ್ಷಪೂರ್ತಿ ಸುಮಾರು 80 ಜನರ ಬಳಿ ಉಳಿತಾಯ ಚೀಟಿಯ ನಾಲ್ಕು 4 ಲಕ್ಷದ 80 ಸಾವಿರ ಹಣವನ್ನ 52 ವಾರಗಳು ಕಟ್ಟಿದ್ದಾರೆ. ಆದ್ರೆ ಚೀಟಿ ಮುಕ್ತಾಯವಾಗುತ್ತಿದ್ದಂತೆ ಹಣ ಕೊಡಬೇಕಿದ್ದ ರವೀಂದ್ರ ಬಾಬು ಆವಾಗ ಕೊಡುತ್ತೇನೆ, ಇವಾಗ ಕೊಡುತ್ತೇನೆ ಅಂತಾ ಹೇಳಿ ಪಂಗನಾಮ ಹಾಕಿದ್ದಾನೆ. ಈ ನಿಟ್ಟಿನಲ್ಲಿ ಚೀಟಿ ಕಟ್ಟಿ ಮೋಸ ಹೋಗಿರೋ ಬಡ ಜನರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರು ಯಾವ ರೀತಿ ನ್ಯಾಯ ಕೊಡಿಸುತ್ತಾರೆ ಅನ್ನೂದನ್ನ ಕಾದು ನೋಡಬೇಕಿದೆ.