ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ವತಿಯಿಂದ “ಸೃಜನಶೀಲತೆ ಮತ್ತು ಕಲಾ ಕ್ಷೇತ್ರ”ದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಪ್ರಸಕ್ತ ಸಾಲಿನ “ಗುರುಕುಲ ಕಲಾಕೌಸ್ತುಭ ರಾಜ್ಯ ಪ್ರಶಸ್ತಿ”ಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶ್ರೀಕ್ಷೇತ್ರ ಸೋಡಿಗದ್ದೆಯ ಶ್ರೀ ಲೀಲಾಧರ ನಾರಾಯಣ ಮೊಗೇರರವರು ಭಾಜನರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಭಾಗವತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಪ್ರವೃತ್ತಿಯಲ್ಲಿ ಸಾಹಿತ್ಯಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಗುರುಕುಲ ಉತ್ತರಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ “ವಾರಕ್ಕೊಂದು ಸ್ಪರ್ಧೆ”ಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರಿನ “ಸಾಹಿತಿ ಶಿಕ್ಷಕರ ವೇದಿಕೆ”ಯ ರಾಜ್ಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಹಂಪಿ ವಿರೂಪಾಕ್ಷ ದೇವಾಲಯದ ಹತ್ತಿರ, ಹೇಮಕೂಟ ಶೂನ್ಯ ಸಿಂಹಾಸನ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ “ಸುವರ್ಣ ಕರ್ನಾಟಕ ಸಂಭ್ರಮ”ದ ಸವಿನೆನಪಿಗಾಗಿ ಇದೇ ನವೆಂಬರ್ 18 ಮತ್ತು 19 ರಂದು ನಡೆಯುವ ಮೂರನೇಯ “ಅಖಿಲ ಭಾರತ ಗುರುಕುಲ ಸಮ್ಮೇಳನ”ದಲ್ಲಿ ಬಸವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತೆ ಮಂಜಮ್ಮ ಜೋಗತಿರವರ ಗೌರವ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆಂದು ರಾಜ್ಯಾಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ಶ್ರೀ ಲಕ್ಷ್ಮೀನಾರಾಯಣ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಶಿವರಾಜ ಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.