ಯಲ್ಲಾಪುರ: ಊರಿನಲ್ಲಿ ಸಾಂಸ್ಕೃತಿಕ ವಾತಾವರಣವಿದ್ದರೆ ಕಲೆ, ಕಲಾವಿದರ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉಪನ್ಯಾಸಕ, ಕಲಾವಿದ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಹೇಳಿದರು.
ಅವರು ತಾಲೂಕಿನ ಮಲವಳ್ಳಿ ಸಮೀಪದ ಬೇಣದಗುಳೆ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಹಾಗೂ ಸ್ವಾಮಿ ವಿವೇಕಾನಂದ ಗ್ರಂಥ ಹಾಗೂ ಸೇವಾ ಬಳಗ ಬೇಣದಗುಳೆ ಇವರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಲಾವಿದರಿಗೆ ಗೌರವ, ಪುರಸ್ಕಾರ ಹಾಗೂ ತಾಳಮದ್ದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತೆರೆಮರೆಯ ಕಲಾವಿದರನ್ನು ಗುರುತಿಸಿ, ಅವರ ಸಾಧನೆಯನ್ನು ಸಮಾಜದೆದುರು ತೆರೆದಿಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದರು.
ಕಲಾವಿದರಾದ ಸುಬ್ರಾಯ ಹೆಬ್ಬಾರ ಬೇಣದಗುಳೆ ಅವರನ್ನು ಗೌರವಿಸಲಾಯಿತು. ಹಿಮಕರ ಗೌಡ ಅವರನ್ನು ಪುರಸ್ಕರಿಸಲಾಯಿತು. ಕಲಾವಿದ ಸದಾಶಿವ ಭಟ್ಟ ಮಲವಳ್ಳಿ ಅಭಿನಂದನಾ ನುಡಿಗಳನ್ನಾಡಿ, ನಿಸ್ವಾರ್ಥ ಕಲಾ ಸೇವಕರನ್ನು ಗುರುತಿಸಿ, ಗೌರವಿಸುತ್ತಿರುವ ಸಂಸ್ಥೆಯನ್ನು ಅಭಿನಂದಿಸಿದರು. ಗೌರವಿಸಲ್ಪಟ್ಟ ಕಲಾವಿದರ ಕಲಾ ಸೇವೆಯ ಕುರಿತು ವಿವರಿಸಿದರು.
ಗೌರವ ಸ್ವೀಕರಿಸಿದ ಸುಬ್ರಾಯ ಹೆಬ್ಬಾರ್ ಹಾಗೂ ಹಿಮಕರ ಗೌಡ, ಕಲಾ ಸೇವೆಯಲ್ಲಿ ಇನ್ನಷ್ಟು ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಲು ಈ ಗೌರವ ಪ್ರೇರಣೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಗ್ರಂಥ ಹಾಗೂ ಸೇವಾ ಬಳಗದ ಅಧ್ಯಕ್ಷ ಅನಂತ ಹೆಗಡೆ ಮಾತನಾಡಿ, ಕರ್ನಾಟಕ ಕಲಾ ಸನ್ನಿಧಿ ಯಕ್ಷಗಾನದಂತೆ ನಾಡಿನ ಇತರ ಕಲಾ ಪ್ರಕಾರಗಳಲ್ಲಿ ಸೇವೆಗೈದ ಕಲಾವಿದರನ್ನೂ ಗುರುತಿಸುವ ಕಾರ್ಯ ಮಾಡುವಂತಾಗಲಿ ಎಂದರು.
ಸಂಸ್ಥೆಯ ಖಜಾಂಚಿ ದಿನೇಶ ಭಟ್ಟ ಅಬ್ಬಿತೋಟ ಪ್ರಾರ್ಥಿಸಿದರು. ಸಹಕಾರ್ಯದರ್ಶಿ ದಿನೇಶ ಗೌಡ ಸ್ವಾಗತಿಸಿ, ನಿರ್ವಹಿಸಿದರು. ಅಧ್ಯಕ್ಷ ಶ್ರೀಧರ ಅಣಲಗಾರ ವಂದಿಸಿದರು.
ನಂತರ ನಡೆದ ಶ್ರೀಕೃಷ್ಣ ಸಂಧಾನ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ ಯಲ್ಲಾಪುರ, ಕಿರಣ ಹೆಗಡೆ ಹಾಡಿಕೈ, ಮದ್ದಲೆವಾದಕರಾಗಿ ರವಿಶಂಕರಲಿಂಗ ಗೋಕರ್ಣ ಭಾಗವಹಿಸಿದ್ದರು.
ಕೌರವನಾಗಿ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ, ಕೃಷ್ಣನಾಗಿ ಸದಾಶಿವ ಮಲವಳ್ಳಿ, ಸುಬ್ರಾಯ ಹೆಬ್ಬಾರ್, ಸಹದೇವನಾಗಿ ಹಿಮಕರ ಗೌಡ, ದ್ರೌಪದಿಯಾಗಿ ಗಣಪತಿ ಭಟ್ಟ ಕೋಗಿಲೆ, ಧರ್ಮರಾಯನಾಗಿ ಶ್ರೀಧರ ಅಣಲಗಾರ, ವಿದುರನಾಗಿ ರಘುರಾಮ ಹೆಬ್ಬಾರ್, ಭೀಮನಾಗಿ ದೇವೇಂದ್ರ ಕುಣಬಿ, ಅರ್ಜುನನಾಗಿ ದಿನೇಶ ಗೌಡ ಪಾತ್ರ ಚಿತ್ರಣ ನೀಡಿದರು.