ಹೊನ್ನಾವರ ತಾಲೂಕಿನೆಲ್ಲೆಡೆ ದೀಪಾವಳಿ ಸಂಭ್ರಮ- ಸಡಗರದಿಂದ ನಡೆದ ಆಯುಧ ಪೂಜಾ ಹಾಗೂ ವಾಹನ ಪೂಜಾ ಕಾರ್ಯಕ್ರಮ


ಹೊನ್ನಾವರ ತಾಲೂಕಿನೆಲ್ಲಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ತಾಲೂಕಿನ ಜನತೆ ಅಂಗಡಿ, ಆಯುಧಪೂಜಾ, ವಾಹನ ಪೂಜಾ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ರು…

ದೀಪಾವಳಿಯ ಮೊದಲನೆ ದಿನ ನೀರು ತುಂಬುವ ಹಬ್ಬದೊಂದಿಗೆ ಆರಂಭವಾಗಿ ಮನೆ ಸ್ವಚ್ಛಗೊಳಿಸಿ, ರಂಗೋಲಿ ಇಟ್ಟು ದೀಪಾವಳಿಗೆ ಚಾಲನೆ ನೀಡಿದ್ದರು. 2ನೇ ದಿನ ಮಕ್ಕಳು ಮೀಯುವ ಹಬ್ಬ ಎಂದು ಕರೆಯಲ್ಪಡುವ ಈ ದಿನ ಮನೆಯ ಮಕ್ಕಳು ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಕಹಿಮದ್ದನ್ನು ಸ್ವೀಕರಿಸಿದ್ರು. ಚಿಣ್ಣರು, ಯುವಕರು ಪಟಾಕಿ ಸಿಡಿಸಿ ಈ ಸಂಭ್ರಮಕ್ಕೆ ಮೆರಗು ತಂದಿದ್ರು. ದೀಪಾವಳಿಯ ಅಮವಾಸ್ಯೆಯಂದು ವಾಹನ ಪೂಜೆ,ಅಂಗಡಿ ಪೂಜೆಗಳು ವಿಜೃಂಭಣೆಯಿಂದ ನಡೆದವು.

ರವಿವಾರ ಸಾಯಂಕಾಲವು ಕೆಲವೆಡೆ ಪೂಜಾ ಕಾರ್ಯ ನಡೆದರೆ, ಇನ್ನು ಕೆಲವೆಡೆ ಸೋಮವಾರ ನಡೆಯಿತು. ಅನೇಕರು ತಮ್ಮ ವಾಹನಗಳನ್ನು ದೇವಾಲಯಕ್ಕೆ ತಂದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದ್ರು. ವಿವಿಧ ರೀತಿಯ ಹೂವಿನಿಂದ ತಮ್ಮ ವಾಹನವನ್ನು ಅಲಂಕರಿಸಿದ್ರು. ಸಂಜೆ ಕೃಷಿ ಯಂತ್ರ, ಪಂಪ್ ಸೆಟ್ ಇತ್ಯಾದಿ ಯಂತ್ರೋಪಕರಣಗಳನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಯ್ತು.

ಅನೇಕ ಸಂಘ ಸಂಸ್ಥೆಯ ಮುಖ್ಯಸ್ಥರು, ಕಚೇರಿ ಮತ್ತು ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಮಾವಿನ ತಳಿರು ತೋರಣಗಳಿಂದ ಶೃಂಗರಿಸಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ಮೂಲಕ ವ್ಯಾಪಾರ ವೃದ್ಧಿಗಾಗಿ ಪ್ರಾರ್ಥಿಸಿದರು. ಪಟ್ಟಣದಲ್ಲಿರುವ ಹೋಟೆಲ್‌ ಹಾಗೂ ಅಂಗಡಿಗಳು ವಿದ್ಯುತ್‌ ದೀಪಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು..

ಒಟ್ನಲ್ಲಿ ಈ ಬಾರಿಯ ದೀಪಾವಳಿ ಹಬ್ಬವನ್ನು ತಾಲೂಕಿನೆಲ್ಲಡೆ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ಹಬ್ಬದಲ್ಲಿ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.