70 ವರ್ಷಗಳ ಬಳಿಕ ಭಟ್ಕಳ ಸರಕಾರಿ ಆಸ್ಪತ್ರೆಯ ಮಡಿಲಿಗೆ ಆಸ್ಪತ್ರೆಯ ಭೂಮಿ

ಭಟ್ಕಳ: ಕಳೆದ 70 ವರ್ಷದ ತಾಲ್ಲೂಕು ಸರಕಾರಿ ಆಸ್ಪತ್ರೆಗೆ ಸೇರಿದ ಕಾಯ್ದಿರಿಸಿದ 13 ಎಕರೆ ಜಾಗದಲ್ಲಿ 7 ಎಕರೆ ಪ್ರದೇಶದ ಜಾಗವು ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಪಹಣಿ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಯಶಸ್ವಿಯಾಗಿದ್ದಾರೆ.

1956 ರಲ್ಲಿ ನಿರ್ಮಾಣಗೊಂಡ ಭಟ್ಕಳ ಸರಕಾರಿ ಆಸ್ಪತ್ರೆಯು ಇಲ್ಲಿಯ ತನಕ ಲಕ್ಷಾಂತರ ಜನರಿಗೆ ಸೇವೆಯನ್ನು ನೀಡುತ್ತಾ ಬಂದಿದೆ. ಆದರೆ ಆಸ್ಪತ್ರೆಯ ಜಾಗ ಅಂದರೆ ಆಸ್ಪತ್ರೆಗಾಗಿ 13 ಎಕರೆ ಕಾಯ್ದಿರಿಸಿದ ಜಾಗವಾಗಿದ್ದು ಅಲ್ಲಿಂದ ಆಸ್ಪತ್ರೆಯ ಹೆಸರಿಗೆ ಜಾಗ ಪಹಣಿ ಮಾಡಲು ಸಾಧ್ಯವಾಗಿಲ್ಲವಾಗಿತ್ತು. ಕಾರಣ ಅಂದು ಪಹಣಿ ಪತ್ರದ ದಾಖಲೆಗಳ ಬಗ್ಗೆ ಮಾಹಿತಿ ಕೊರತೆ ಮತ್ತು ಜಾಗದ ಒತ್ತುವರಿಗಳ ಬಗ್ಗೆ ಯಾವುದೇ ಸಮಸ್ಯೆಗಳಿಲ್ಲವಾಗಿತ್ತು.

ದಿನಕಳೆದಂತೆ ಆಸ್ಪತ್ರೆಗೆ ಕಾಯ್ದಿರಿಸಿ 13 ಎಕರೆ ಜಾಗವು ಸ್ವಲ್ಪ ಸ್ವಲ್ಪವಾಗಿ ಒತ್ತುವರಿಯಾಗುತ್ತಾ ಇರುವ ವೇಳೆ ಅಂದು ಅಂದರೆ ಅಂದಾಜು 20 ವರ್ಷಗಳ ಹಿಂದೆ ಸೇವೆ ಮಾಡುತ್ತಿದ್ದ ಆಡಳಿತ ವೈದ್ಯಾಧಿಕಾರಿಗಳು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಜಾಗ ಒತ್ತುವರಿ ಮಾಡುವವರ ವಿರುದ್ದ ಧರಣಿ, ಪ್ರತಿಭಟನೆ ಸೇರಿದಂತೆ ಆಸ್ಪತ್ರೆಯ ಜಾಗಕ್ಕಾಗಿ ಹೋರಾಟಕ್ಕಿಳಿದಿದ್ದರು.

ಸುಮಾರು 2001ರ ಅವಧಿಯಲ್ಲಿ ನೈಜವಾಗಿ ಆಸ್ಪತ್ರೆಯ ಜಾಗವನ್ನು ಉಳಿಸಿ ಇಲ್ಲಿನ ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಆಸ್ಪತ್ರೆಯ ಜಾಗವನ್ನು ಪಹಣಿ ಮಾಡಿಸಿಕೊಡಬೇಕೆಂಬ ಹೋರಾಟ ಮತ್ತು ಅಂದಿನಿಂದ ಇಂದಿನ ತನಕ ಬಂದ ಎಲ್ಲಾ ಸಹಾಯಕ ಆಯುಕ್ತರಿಗೆ ಮನವಿ ನೀಡುತ್ತಾ ಬರುತ್ತಿದ್ದರು. ಆದರೆ ತಾಲೂಕು ಸಹಾಯಕ ಆಯುಕ್ತರುಗಳ ಕೈಯಲ್ಲಿ ಕಂದಾಯ ಹಾಗೂ ಎಲ್ಲಾ ಇಲಾಖೆಗಳ ಹಿಡಿತವಿದ್ದ ಹಿನ್ನೆಲೆ ಆಸ್ಪತ್ರೆಗೊಂದು ಜಾಗದ ಪಹಣಿ ಮಾಡುವ ಮನಸ್ಸಿಗೆ ಯಾವೊಬ್ಬ ಸಹಾಯಕ ಆಯುಕ್ತರು ಮುಂದಾಗಿಲ್ಲವಾಗಿತ್ತು. ಆಸ್ಪತ್ರೆಗಾಗಿ ಕಾಯ್ದಿರಿಸಿದ ಜಾಗವನ್ನು ಬೇರೆ ಸರಕಾರಿ ಕಟ್ಟಡಕ್ಕೆ ನೀಡಬೇಕಾದರೆ ವೈದ್ಯರ ಗಮನಕ್ಕೆ ತಾರದೇ ಅವೆಲ್ಲ‌ ಜಾಗದ ಪಹಣಿಯಾಗುತ್ತಿತ್ತು. ಅದೇ ಒತ್ತುವರಿಗಳಾದರೆ ನ್ಯಾಯಾಲಯಕ್ಕೆ ಪದೇ ಪದೇ ಆಸ್ಪತ್ರೆಯ ವೈದ್ಯರನ್ನು ಮಾತ್ರ ಕರೆಯಿಸಿಕೊಳ್ಳುತ್ತಿದದ್ದು ಮಾತ್ರ ವೈದ್ಯರಲ್ಲಿ ಅಸಮಾಧಾನವಿತ್ತು.

2001ರಲ್ಲಿ ಆಸ್ಪತ್ರೆಯ ಜಾಗಕ್ಕೊಂದು ಪಹಣಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದು ಅಲ್ಲಿಂದ ಶುರುವಾದ ಹೋರಾಟವು ಇಂದಿನ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಹಾಗೂ ಉಳಿದ ಆಸ್ಪತ್ರೆಯ ವೈದ್ಯರುಗಳ ಸಹಕಾರದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಸದರಿ 7 ಎಕರೆ 3 ಗುಂಟೆ ಜಾಗವನ್ನು ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಪಹಣಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವ ಮಂಕಾಳ ವೈದ್ಯ ಅವರು ಆಸ್ಪತ್ರೆಯ ಜಾಗಕ್ಕೊಂದು ಕಾಯಕಲ್ಪ ನೀಡಬೇಕೆಂದು ಇದರ ಮುಂಚೂಣಿಯಲ್ಲಿದ್ದು ಸದ್ಯ ಭಟ್ಕಳ ಸರಕಾರಿ ಆಸ್ಪತ್ರೆ ರಾಜ್ಯ ಮಟ್ಟದಲ್ಲಿಯೇ ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು ಸದ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರು ಹೆಚ್ಚಾಗುತ್ತಿದ್ದು, ಇದನ್ನು ಮೇಲ್ದರ್ಜೆಗೆರಿಸಬೇಕಾದಲ್ಲಿ ಜಾಗದ ಅವಶ್ಯಕತೆ ಹಿನ್ನೆಲೆಯಲ್ಲಿ ಜಾಗದ ಪಹಣಿಯನ್ನು ಮಾಡಿಸುವಲ್ಲಿ ಕಾರಣೀಕರ್ತರಾಗಿದ್ದಾರೆ.

ಈ ಹಿಂದೆ ಮಂಕಾಳ ವೈದ್ಯ ಅವರು ಶಾಸಕರಾಗಿದ್ದ ಅವಧಿಯಲ್ಲಿ
100 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿಸಿ ಎಲ್ಲಾ ವ್ಯವಸ್ಥೆಯ ಕಲ್ಪಿಸಿಕೊಡಲಾಗಿತ್ತು. ಈಗ ಆಸ್ಪತ್ರೆಯಿಂದ‌ ಜನರಿಗೆ ಸಾಗುತ್ತಿರುವ ಸೇವೆ ವಿಸ್ತರಿಸುವ ಹಿನ್ನೆಲೆ 250 ಹಾಸಿಗೆಯುಳ್ಳ ವ್ಯವಸ್ಥೆಗಾಗಿ ಸರಕಾರದಿಂದ ಅನುದಾನ ಪಡೆಯುವಲ್ಲಿ ಸಚಿವ ಮಂಕಾಳ ವೈದ್ಯ ಅವರ ಪ್ರಯತ್ನ ಮುಂದುವರೆದಿದೆ.

ಅಂತು ಇಂತು ಸರಕಾರಿ ಆಸ್ಪತ್ರೆಯ ಜಾಗಕ್ಕೊಂದು ಪಹಣಿಯ ಜೊತೆಗೆ ಮುಂದಿನ ಕಾಯಕಲ್ಪಕ್ಕೆ ಸ್ವತಂತ್ರ ಜಾಗವೊಂದು ಸಿಕ್ಕಂತಾಗಿದ್ದು ಮುಂದಿನ ಸೇವೆಗೆ ಇವು ಸಹಕಾರಿಯಾಗಲಿದೆ.

‘ಭಟ್ಕಳ ಸರಕಾರಿ ಆಸ್ಪತ್ರೆಯು ಸದ್ಯ ರಾಜ್ಯದ ಮಾದರಿ ಸರಕಾರಿ ಆಸ್ಪತ್ರೆಯಲ್ಲಿ ಒಂದಾಗಿದ್ದು ಈ ಹಿನ್ನೆಲೆ ರೋಗಿಗಳ ಅನೂಕೂಲಕ್ಕಾಗಿ 250 ಹಾಸಿಗೆಯುಳ್ಳ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಅದರಂತೆ ಇಲ್ಲಿ ಸೇವೆ ಸಲ್ಲಿಸಿ ಕೆಲಸ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕ್ವಾಟ್ರಸ್ ಅನಿವಾರ್ಯತೆಯಿದ್ದು ಇವೆಲ್ಲದಕ್ಕು ಜಾಗದ ಅವಶ್ಯಕತೆಯ ಜೊತೆಗೆ ನಿಗದಿತ ಜಾಗದ ಪಹಣಿ ಮಾಡಲೇಬೇಕಾಗಿದೆ. 70 ವರ್ಷದ ಆಸ್ಪತ್ರೆಯ ಜಾಗದ ಪಹಣಿ ನನ್ನ ಅವಧಿಯಲ್ಲಿ ಆಗಿರುವುದಕ್ಕೆ ಸಂತಸದ ಜೊತೆಗೆ ಸಮಾಧಾನ ಇದೆ. ಮುಂದಿನ ಎಲ್ಲಾ ಅಭಿವೃದ್ಧಿ ಕೆಲಸಕ್ಕೆ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆಯನ್ನು ನಡೆಸಿ ಆಸ್ಪತ್ರೆಯ ಬೆಳವಣಿಗೆ ಮಾಡಬೇಕಾಗಿದೆ.

ಮಂಕಾಳ ವೈದ್ಯ – ಉಸ್ತುವಾರಿ ಸಚಿವ

‘ಆಸ್ಪತ್ರೆಯ ಅಭಿವೃದ್ಧಿಗೆ ಮೀಸಲಿಟ್ಟ ಜಾಗವನ್ನು ಪಹಣಿ ಮಾಡಬೇಕಾದ ಅವಶ್ಯಕತೆ ಇದೆ. ಈಗಾಗಲೇ ಸಾಕಷ್ಟು ಜಾಗವು ಸರಕಾರಿ ಕಟ್ಟಡದ ನಿರ್ಮಾಣಕ್ಕಾಗಿ ಒತ್ತುವರಿಯಾಗಿದ್ದವು. ಮೇಲ್ದರ್ಜೆಗೆರಿಸಲು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಹೆಸರಿಗೆ ಪಹಣಿ ಮಾಡಲೇಬೇಕಾಗಿದೆ. ಇದಕ್ಕೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮುತುವರ್ಜಿ ವಹಿಸಿದ್ದು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರ ಸಹ ಸಹಕಾರ ನೀಡಿದ್ದಾರೆ.