ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಕೇಂದ್ರೀಯ ವಿದ್ಯಾಲಯದಲ್ಲಿ ಪಾಲಕರ ಕ್ರೀಡಾಕೂಟ

ಹೊನ್ನಾವರ: ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಪಾಲಕರ ಕ್ರೀಡಾಕೂಟವನ್ನು ತಾಲೂಕಿನ ಖ್ಯಾತ ವೈದ್ಯ ಡಾ.ರಂಗನಾಥ ಪೂಜಾರಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಮಹಾತ್ಮಾ ಗಾಂಧೀಜಿಯವರ ಮೂರು ಮಂಗಗಳ ಕಥೆಯನ್ನು ವ್ಯಾಖ್ಯಾನಿಸುತ್ತಾ ಇದೀಗ ನಾಲ್ಕನೇ ಮಂಗವೂ ಸೇರಿಕೊಳ್ಳುತ್ತಿದೆ. ಅದ್ಯಾವುದೆಂದರೆ ಮೊಬೈಲ್ ಹಿಡದುಕೊಂಡು ಸುತ್ತಲೂ ನಡೆಯುವ ವಿಚಾರಗಳ ಪರಿವೇ ಇಲ್ಲದೆ ಕುಳಿತಿರುತ್ತಾರೆ. ಅಂತಹ ಪ್ರವೃತ್ತಿ ಬದಲಾಗಬೇಕೆಂದರೆ ಹೋಗಲಾಡಿಸಬೇಕು ಎಂದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು.ಎಂ.ಪಿ.ಇ ಸೊಸೈಟಿ ಕೇಂದ್ರೀಯ ವಿದ್ಯಾಲಯದಲ್ಲಿ ಪಾಲಕರ ಕ್ರೀಡಾಕೂಟವನ್ನು ಪ್ರತಿ ವರ್ಷ ಆಯೋಜಿಸಿ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಪಾಲಕರು ಸಹ ವಿದ್ಯಾರ್ಥಿಗಳ ಜೊತೆ ಹೆಚ್ಚಿನ ಕಾಲವನ್ನು ಕಳೆಯಬೇಕು. ಮಕ್ಕಳ ಬೆಳೆವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡಬೇಕು.ಮಕ್ಕಳ ಭವಿಷ್ಯದ ಸಲುವಾಗಿ ಶಿಕ್ಷಕರ ಜೊತೆ ಕೈಜೋಡಿಸಿ ಎಂದು ಕರೆಯನ್ನು ಕೊಟ್ಟರು.
ಇದೇ ವೇಳೆ ಆಡಳಿತ ಮಂಡಳಿಯ ಮಹತ್ವಾಕಾಂಕ್ಷಿ ಯೋಜನೆಯಾದ ವಿದ್ಯಾಸಂಜೀವಿನಿ ಯೋಜನೆಗೆ ಮತ್ತು ಆಡಳಿತ ಮಂಡಳಿ ನಡೆಸುತ್ತಿರುವ ವಿವಿಧ ಯೋಜನೆಗಳಿಗೆ , ಸ್ಫರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ತಮ್ಮ ತನು, ಮನ, ಧನ ಸಹಾಯವನ್ನು ನೀಡುತ್ತೇನೆ ಎಂದು ಘೋಷಿಸಿದರು.ಅಲ್ಲದೆ ಕೇಂದ್ರೀಯ ವಿದ್ಯಾಲಯದಲ್ಲಿ ಅಭ್ಯಸಿಸುವ ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ವಿದ್ಯಾರ್ಥಿಗೆ ರೂಪಾಯಿ ಒಂದುಸಾವಿರವನ್ನು ತಾವು ಹೊನ್ನಾವರದಲ್ಲಿ ಇರುವವರೆಗೂ ನೀಡುತ್ತೇನೆ ಎಂಬ ಭರವಸೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ , ಶಿವಾನಿ ಮಾತನಾಡಿ ಶಿಕ್ಷಕರು, ಪಾಲಕರು ಮತ್ತು ಆಡಳಿತ ಮಂಡಳಿಯ ನಡುವೆ ಸಾಮರಸ್ಯ ಬೆಳೆಯಬೇಕು ಅನ್ನುವ ಕಾರಣಕ್ಕೆ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವುದಾಗಿದೆ. ಪಾಲಕರು , ಶಿಕ್ಷಕರು ಒಂದೆಡೆ ಸೇರಿ ಶಾಲೆಯ ಅಭಿವೃದ್ದಿಗೆ ಪೂರಕವಾಗಿರಬೇಕು.ಪಾಲಕರ ತೊಡಗಿಸಿಕೊಳ್ಳುವಿಕೆ ಅತ್ಯಂತ ಮಹತ್ವದ್ದು.ಶಾಲೆಯ ಶಿಸ್ತಿನಲ್ಲಿ ಯಾವತ್ತೂ ನಾವು ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ.ಪಾಲಕರು ಶಿಕ್ಷಣಸಂಸ್ಥೆಯ ಅಂಗ. ಇದು ಕುಟುಂಬ ಇದ್ದಂತೆ ಎಲ್ಲರೂ ಅನ್ಯೋನ್ಯವಾಗಿರಬೇಕು.ಎಲ್ಲರೂ ಸಂತೋಷದಿಂದಿದ್ದರೆ ಉತ್ತಮ ಫಲಿತಾಂಶ ಬರುತ್ತದೆ. ಶೈಕ್ಷಣಿಕವಾಗಿ ನಾವು ಸಾಧಿಸುವ ಸಾಧನೆಯಷ್ಟೆ ಮುಖ್ಯವಲ್ಲ. ಹೆಚ್ಚಿನ ಅಂಕಗಳಿಸಿದವರು ಮಾತ್ರ ದೊಡ್ಡ ಸಾಧನೆ ಮಾಡಿದವರು ಅಂತಲ್ಲ. ಸಮಾಜದಲ್ಲಿ ಬದುಕಲು ಅಂಕಗಳೇ ಮುಖ್ಯವಲ್ಲ ಎಂದು ಹೇಳಿದರು.

ತಾಲೂಕಿನ ಖ್ಯಾತ ವೈದ್ಯರಾಗಿರುವ ಡಾ.ರಂಗನಾಥ ಪೂಜಾರಿ ದಂಪತಿಯನ್ನು ಇದೇ ವೇಳೆ ಆಡಳಿತಮಂಡಳಿ ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಲಾಯ್ತು.
ಶಾಲೆಯ ಪ್ರಾಚಾರ್ಯೆ ಶ್ರೀಮತಿ ಕಾಂತಿ ಭಟ್ , ಶಿಕ್ಷಕಿಯರಾದ ದೀಪಾ ಭಟ್ , ವಿಜಯಲಕ್ಷ್ಮಿ ನಾಯ್ಕ,ಸುಪ್ರೀತಾ ನಾಯ್ಕ ಹಾಜರಿದ್ದರು. ಶಾಲೆ ಹಮ್ಮಿಕೊಂಡ ಪಾಲಕರ ಕ್ರೀಡಾಕೂಟದಲ್ಲಿ 250ಕ್ಕು ಹೆಚ್ಚಿನ ಪಾಲಕರು ಭಾಗವಹಿಸಿ, ಶಾಲೆ ಪ್ರತಿ ವರ್ಷ ನಡೆಸುವ ಈ ಕ್ರೀಡಾಕೂಟ ಚೆನ್ನಾಗಿ ನಡೆಯುತ್ತಿದೆ ಎಂದು ಶುಭವನ್ನು ಹಾರೈಸಿದರು.