ಹೊನ್ನಾವರ : ಹೊನ್ನಾವರ ಬ್ಲಾಕ್ ಕಾಂಗ್ರೆಸ್‌ನಿಂದ ಮಹಿಳಾ ಪೌರ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಮಾಜಿ ಪ್ರಧಾನಿ ದಿ. ಇಂಧಿರಾ ಗಾಂಧಿಯವರ 39ನೇ ಪುಣ್ಯತಿಥಿ ಹಾಗೂ ಭಾರತದ ಪ್ರಥಮ ಗೃಹ ಮಂತ್ರಿ ಸರದಾರ್ ವಲ್ಲಭ್ ಭಾಯಿ ಪಟೇಲ್ ಅವರ 148ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಸ್ಮರಿಸಿದರು.
ಹೊನ್ನಾವರ ಪಟ್ಟಣ ಪಂಚಾಯತ್‌ನಲ್ಲಿ ಮಹಿಳಾ ಪೌರ ಕಾರ್ಮಿಕರಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಾ ನಗರದ ಸ್ವಚ್ಛತೆಯನ್ನು ಕಾಪಾಡಲು ಹಗಲು-ರಾತ್ರಿ ಪರಿಶ್ರಮಿಸುತ್ತಿರುವ ಕಮಲಾ ಹಿರಣಯ್ಯ ಹರಿಜನ ಮತ್ತು ಲಕ್ಷ್ಮೀ ಸೋಮಾ ಇವರನ್ನು ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಮಾತನಾಡಿ, ತಮ್ಮ ಅನೇಕ ದಿಟ್ಟ ನಿರ್ಧಾರಗಳಿಂದ ರಾಷ್ಟ್ರ ಮತ್ತು ಅಂತರಾಷ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿಯವರು ಉಕ್ಕಿನ ಮಹಿಳೆಯೆಂದೇ ಪ್ರಸಿದ್ದರಾಗಿದ್ದರು. ಇಂತಹ ಮಹಾನ ನಾಯಕಿಯ ಪುಣ್ಯ ದಿನದಂದು ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿರುವ ಮಹಿಳೆಯರನ್ನು ಗುರುತಿಸಿ, ಅವರನ್ನು ಅರ್ಥಪೂರ್ಣವಾಗಿ ಸನ್ಮಾನಿಸಿ, ಗೌರವಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ ಎಂದರು. 80ರ ದಶಕದಲ್ಲಿ ಭಾರತದ ಐಕ್ಯತೆಗೆ ಸವಾಲಾಗಿ ಪರಿಣಮಿಸಿದ್ದ, ಪ್ರತ್ಯೇಕ ಖಲಿಸ್ತಾನ ಕನಸು ಕಂಡಿದ್ದ ಉಗ್ರಗಾಮಿಗಳ ಹುಟ್ಟಡಗಿಸಲು, ಆಪರೇಶನ್ ಬ್ಲೂ ಸ್ಟಾರ್ ಮೂಲಕ ಸೈನಿಕರನ್ನು ಸುವರ್ಣ ಮಂದಿರದಲ್ಲಿ ಬಿಟ್ಟು, ಖಲಿಸ್ತಾನ ಉಗ್ರಗಾಮಿಗಳನ್ನು ಮಟ್ಟ ಹಾಕಿದ ದಿಟ್ಟ ಮಹಿಳೆ ಇಂದಿರಾ ಗಾಂಧಿ ಎಂದು ಹೆಮ್ಮೆ ವ್ಯಕ್ತ ಪಡಿಸಿ, ಅದೇ ವಿಷಯ ಇಂದಿರಾ ಗಾಂಧಿಯವರ ಪ್ರಾಣಕ್ಕೆ ಮುಳುವಾಗಿದ್ದು ಮಾತ್ರ ದೇಶದ ಘನಘೋರ ದುರಂತ ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಶಿಕ್ಷಕರ ವಿಭಾಗದ ಅಧ್ಯಕ್ಷ ಡಾ. ಎಸ್.ಡಿ.ಹೆಗಡೆ ಮಾತನಾಡಿ ದೇಶ ಕಂಡ ಇನ್ನೊಬ್ಬ ಮಹಾನ್ ನಾಯಕ, ಸರದಾರ್ ವಲ್ಲಬ್‌ಬಾಯಿ ಪಟೇಲ್ ಎಂದರು. ಭಾರತದ ಪ್ರಥಮ ಗೃಹ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸರದಾರ ವಲ್ಲಭಬಾಯಿ ಪಟೇಲ್ ಅನೇಕ ದಿಟ್ಟ ನಿರ್ಣಯ ಕೈಗೊಂಡಿದ್ದರು. ಸ್ವತಂತ್ರ ಭಾರತದ ಶಿಲ್ಪಿ ಎಂದೇ ಹೆಸರಾಗಿದ್ದ ಅವರು, ರಾಜರ ಆಳ್ವಿಕೆಯಲ್ಲಿದ್ದ 650ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಒಗ್ಗೂಡಿಸಿ, ಅಖಂಡ ಭಾರತದ ಭದ್ರ ಬುನಾದಿಗೆ ಕಾರಣರಾಗಿದ್ದವರು ಸರದಾರ್ ಪಟೇಲ್ ಎಂದು ಅವರ ಆಡಳಿತವನ್ನು ಶ್ಲಾಘಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಾಮೋದರ ನಾಯ್ಕ,ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಬಿಸಿಸಿ ಕಾರ್ಯದರ್ಶಿ ಜ್ಯೋತಿ ಮಹಾಲೆ, ಅನೀತಾ ಶೇಟ, ಗೀತಾ ರಾಯ್ಕರ, ಮಾರಿಯಾ ಗೊನ್ಸಲಿಸ್, ಮಂಜುನಾಥ ಶಾನಭಾಗ, ಇನ್ನೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.