ಯಲ್ಲಾಪುರ: ರಾಜಕಾರಣ ಮಾಡುವುದಕ್ಕೆ ನಾವಿದ್ದೇವೆ. ಅಧಿಕಾರಿಗಳು ರಾಜಕಾರಣ ಮಾಡಲು ಹೋಗಬೇಡಿ. ಜನರ, ಬಡವರ ಕೆಲಸವನ್ನು ಸಮರ್ಪಕವಾಗಿ ಮಾಡಿಕೊಟ್ಟರೆ ಅಷ್ಟೇ ಸಾಕು. ಅದನ್ನು ಮಾಡದೇ ಇರುವ ಅಧಿಕಾರಿಗಳಿಗೆ ನಮ್ಮ ಜಿಲ್ಲೆಯಲ್ಲಿ ಮುಂದುವರಿಯಲು ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.
ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ನುಡಿದಂತೆ ನಡೆದಿದೆ. ಪಕ್ಷ, ಜಾತಿ ಬೇಧವಿಲ್ಲದೇ ಎಲ್ಲರೂ ಸುಖವಾಗಿರಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್ಟ ಮಾಹಿತಿ ನೀಡುವಾಗ, ಇಲಾಖೆಯಲ್ಲಿ 36 ಕೋಟಿ ರೂ ಬಿಲ್ ಬಾಕಿ ಇದೆ ಎಂದರು. ಆಗ ಸಚಿವರು, ನಮ್ಮ ಸರ್ಕಾರ ಬಂದ ನಂತರ ಯಾವುದೇ ಕಾಮಗಾರಿ ಆಗಿಲ್ಲ, ಇದು ಹಳೆಯ ಬಾಕಿ. ಬಿಜೆಪಿ ಸರ್ಕಾರದ ಸಾಲ ತೀರಿಸುವ ಕೆಲಸ ನಮ್ಮದಾಗಿದೆ ಎಂದು ವ್ಯಂಗ್ಯವಾಡಿದರು.
ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಎಲೆಚುಕ್ಕೆ ರೋಗ ವ್ಯಾಪಿಸಿದ್ದು ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳು ಇದರ ನಿಯಂತ್ರಣದ ಜತೆಗೆ, ಸೂಕ್ತ ಔಷಧಿ ಪೂರೈಸುವ ಕಾರ್ಯ ಮಾಡಬೇಕು. ವಿಳಂಬ ಮಾಡಿದರೆ ಅಡಕೆ ತೋಟಗಳಿಗೆ ಹಾನಿಯಾಗುವ ಅಪಾಯವಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಎಲೆ ಚುಕ್ಕೆ ರೋಗ ಎರಡನೇ ಹಂತದಲ್ಲಿದೆ. ನಿಯಂತ್ರಣಕ್ಕಾಗಿ ಉಚಿತವಾಗಿ ಔಷಧಿ ನೀಡಲು 6 ಲಕ್ಷ ರೂ ಅನುದಾನ ಬಂದಿದೆ. ಆದರೆ ಅದು ಸಾಲುತ್ತಿಲ್ಲ, ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಸತೀಶ ಹೆಗಡೆ ಮಾಹಿತಿ ನೀಡಿದರು. ಸಚಿವರು ಹೆಚ್ಚಿನ ಅನುದಾನ ಒದಗಿಸುವ ಭರವಸೆ ನೀಡಿದರು.
ಉಸುಕಿನ ಸಮಸ್ಯೆಯಿಂದ ಕಾಮಗಾರಿಗಳಿಗೆ ಸಮಸ್ಯೆಯಾಗುತ್ತಿರುವ ಕುರಿತು ಗುತ್ತಿಗೆದಾರ ವಿ.ಎಂ.ಹೆಗಡೆ ಪ್ರಸ್ತಾಪಿಸಿದರು. ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದರು.
ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಕುರಿತು ಕೇಳಿದ ಪ್ರಶ್ನೆಗೆ, ಇದು ಒಂದೋ, ಎರಡೋ ತಾಲೂಕುಗಳ ಸಮಸ್ಯೆಯಲ್ಲ, ಇಡೀ ಜಿಲ್ಲೆಯ ಸಮಸ್ಯೆ. ಕೊರತೆ ನೀಗಿಸುವ ಕಾರ್ಯ ಮಾಡಲಾಗುವುದು ಎಂದರು.
ಪಟ್ಟಣದ ಉದ್ಯಮನಗರದಲ್ಲಿ ಅತಿಕ್ರಮಣ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಪರಿಶಿಷ್ಟ ಪಂಗಡದ 42 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಹೆಸ್ಕಾಂ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕಟ್ಟಿಮನಿ ಆರೋಪಿಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಮಧ್ಯಪ್ರವೇಶಿಸಿದ ಸಚಿವ ವೈದ್ಯ, ಒಂದು ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ನೀಡಿದರು. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಸತಿ ಯೋಜನೆಯ ಫಲಾನುಭವಿಯೊಬ್ಬರಿಗೆ ಪಿಡಿಒ ತಾರತಮ್ಯ ನೀತಿ ಅನುಸರಿಸುತ್ತಿರುವ ಕುರಿತು ಶಂಕರ ಹೆಗಡೆ ಹೊನಗದ್ದೆ ದೂರಿದರು. ಜಿ.ಪಂ ಸಿಇಒ ಅವರು ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸಿ, ಬಗೆಹರಿಸುವಂತೆ ಸಚಿವರು ಸೂಚಿಸಿದರು.
ಶಾಸಕ ಶಿವರಾಮ ಹೆಬ್ಬಾರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿ.ಪಂ ಸಿಇಒ ಈಶ್ವರ ಕಾಂದೂ, ಡಿಸಿಎಫ್ ಎಸ್.ಜಿ.ಹೆಗಡೆ, ಉಪವಿಭಾಗಾಧಿಕಾರಿ ಆರ್.ದೇವರಾಜ, ತಾ.ಪಂ ಆಡಳಿತಾಧಿಕಾರಿ ನಟರಾಜ.ಟಿ.ಎಚ್, ತಹಸೀಲ್ದಾರ ಗುರುರಾಜ. ಎಂ ಇತರರಿದ್ದರು.