ದಾಂಡೇಲಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನವೆಂಬರ್ ತಿಂಗಳಿಡೀ ಜಿಲ್ಲೆಯಾದ್ಯಂತ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವ ‘ಕನ್ನಡ ಕಾರ್ತಿಕ : ಅನುದಿನ -ಅನುಸ್ಪಂದನ’ ಎಂಬ ಕಾರ್ಯಕ್ರಮವನ್ನು ಈ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.
ಭಾನುವಾರ ನಗರದ ಹಳೆ ನಗರ ಸಭಾ ಕಟ್ಟಡದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ಕನ್ನಡ ಕಾರ್ತಿಕ : ಅನುದಿನ -ಅನುಸ್ಪಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಡಿ ದಾಂಡೇಲಿಯ ಸಾಹಿತ್ಯ ಭವನದಲ್ಲಿ ನ:01 ರಂದು ಸಂಜೆ ನಡೆಯಲಿದೆ. ನ. 30ರಂದು ಕಾರವಾರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಕನ್ನಡದ ಕಂಪನ್ನು ಪಸರಿಸುವ ಈ ಕಾರ್ಯಕ್ರಮದಲ್ಲಿ ಕನ್ನಾಡಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಬಿ.ಎನ್.ವಾಸರೆಯವರು ವಿನಂತಿಸಿದರು.
ಈ ಸಂದರ್ಭದಲ್ಲಿ ನಗರದ ಕರ್ನಾಟಕ ಸಂಘದ ಅಧ್ಯಕ್ಷರಾದ ಯು.ಎಸ್.ಪಾಟೀಲ್, ಪ್ರ.ಕಾರ್ಯದರ್ಶಿ ಕೀರ್ತಿ ಗಾಂವಕರ್, ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಮುರ್ತುಜಾ ಆನೆಹೊಸೂರು ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಗುರುಶಾಂತ ಜಡೆಹಿರೇಮಠ ಮತ್ತು ಪ್ರವೀಣ್ ನಾಯ್ಕ, ಕಸಾಪ ಪದಾಧಿಕಾರಿಗಳಾದ ಸುರೇಶ್ ಕಾಮತ್, ಸುರೇಶ್ ಪಾಲನಕರ್, ವೆಂಕಮ್ಮ ಗಾಂವಕರ್, ಕಲ್ಪನಾ ಪಾಟೀಲ್, ಆಶಾ ದೇಶಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.