ಟ್ಯಾಂಕರ ಮಾಲೀಕರ ಸಂಘದ ವತಿಯಿಂದ ನಡೆಸಿದ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತ

ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 66 ರ ಬಾಳೆಗುಳಿ ಟೋಲ್ ಹತ್ತಿರ ಬಿಟುಮಿನ (ಡಾಂಬರು) ಟ್ಯಾಂಕರಗಳನ್ನು ತಡೆದು ನಿಲ್ಲಿಸಿ ನಡೆಸಿದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಂಕೋಲಾ ಕಾರವಾರ ಟ್ಯಾಂಕರ ಮಾಲೀಕರ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲಿಮನೆ ಹೇಳಿದ್ದಾರೆ.
ಟೋಲಗೇಟ್ ಬಳಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಡಾಂಬರು ಸರಬರಾಜು ಕಂಪನಿಯವರು ಸ್ಥಳೀಯ ಟ್ಯಾಂಕರುಗಳನ್ನು ಕಡೆಗಣಿಸಿ ಹೊರರಾಜ್ಯದ ಟ್ಯಾಂಕರುಗಳಿಗೆ ಅವಕಾಶ ನೀಡುತ್ತಿರುವದನ್ನು ಖಂಡಿಸಿ ಸ್ಥಳೀಯ ಟ್ಯಾಂಕರುಗಳ ಮಾಲೀಕರ ಸಂಘ ಪ್ರತಿಭಟನೆ ನಡೆಸಿತ್ತು. ಈ ಹಿಂದೆಯೂ ಹಲವು ಸಲ ಪ್ರತಿಭಟನೆ ನಡೆಸಿದ ಮೇಲೆ ಸ್ಥಳೀಯ ಟ್ಯಾಂಕರುಗಳಿಗೂ ಅವಕಾಶ ನೀಡಿದ್ದರು. ಆದರೆ ಈಗ ಕಂಪನಿಯವರು ಏಕಾಏಕಿ ತಮ್ಮ ವರಸೆ ಬದಲಾಯಿಸಿ ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ಹೊರರಾಜ್ಯದ ಮೂವತ್ತಕ್ಕೂ ಹೆಚ್ಚು ಟ್ಯಾಂಕರುಗಳನ್ನು ತರಿಸಿಕೊಂಡಿದ್ದು ಸ್ಥಳೀಯ ಟ್ಯಾಂಕರ ಮಾಲೀಕರು ಉದ್ಯೋಗವಿಲ್ಲದೆ ಸಾಲದ ಕಂತು ಪಾವತಿಸಲಾಗದೆ ಅಕ್ಷರಶಃ ಬೀದಿಗೆ ಬರುವಂತಾಗಿದೆ. ಹೊರರಾಜ್ಯದ ನೊಂದಣಿ ಇರುವ ವಾಹನಗಳು ಜಿಲ್ಲೆಯೊಳಗೆ ಅಥವಾ ಅಂತರಜಿಲ್ಲೆಯೊಳಗೆ ಸರಕು ಸಾಗಾಟ ಮಾಡುವಂತಿಲ್ಲ ಆದರೆ ಇವರು ನಿಯಮ ಮೀರಿ ಸಾಗಾಟ ಮಾಡುತ್ತಿರುವದನ್ನು ಆರ್ ಟಿಓ ಅಧಿಕಾರಿಗಳು ಯಾಕೆ ನಿರ್ಬಂಧಿಸುತ್ತಿಲ್ಲ, ಪೊಲೀಸ ಇಲಾಖೆ ಯಾಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು. ಹೀಗಾಗಿ ಅನಿವಾರ್ಯವಾಗಿ ಟ್ಯಾಂಕರುಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಬೇಕಾಯಿತು.
ಇದನ್ನು ಶಾಸಕರಾದ ಸತೀಶ ಸೈಲ್ ಅವರ ಗಮನಕ್ಕೂ ತರಲಾಗಿತ್ತು. ಶಾಸಕರು ನವೆಂಬರ 6ರಂದು ಜಿಲ್ಲಾಧಿಕಾರಿಗಳು ಮತ್ತು ಕಂಪ‌ನಿಯವರ ಜೊತೆ ಟ್ಯಾಂಕರ ಮಾಲೀಕರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದರು. ಹಾಗೂ ಆವತ್ತಿನ ಸಭೆಯಲ್ಲಿಯೂ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಿರಣ ನಾಯ್ಕ, ಮಾರುತಿ ನಾಯ್ಕ, ವಿನೋದ ನಾಯ್ಕ, ನಾಗೇಂದ್ರ ತಳೇಕರ, ಪ್ರಶಾಂತ, ಸಂಕೇತ, ಗುರುರಾಜ, ದೇವೇಂದ್ರ, ನಿತಿನ‌ ನಾಯ್ಕ, ಸುಬ್ರಹ್ಮಣ್ಯ, ಕೃಷ್ಣಾನಂದ, ನಾರಾಯಣ ಇನ್ನಿತರರು ಇದ್ದರು.