ಹೊನ್ನಾವರದ ಖರ್ವಾ ಸ. ಹಿ.ಪ್ರಾ ಶಾಲೆಯ ಶತಮಾನೋತ್ಸವ ಲೋಗೋ ಅನಾವರಣ ಕಾರ್ಯಕ್ರಮ

ಹೊನ್ನಾವರ: ಶಾರದಾ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕಲೆ,ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಕೃಷಿ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತೊಡಗಿಕೊಂಡಿರುವುದರಿಂದ ಸಾಂಕೇತಿಕವಾಗಿ ಆ ಎಲ್ಲಾ ಕ್ಷೇತ್ರವನ್ನು ಸಾಂಕೇತಿಕವಾಗಿ ಗುರುತಿಸುವ ಪರಿಕರವನ್ನು ಭತ್ತದ ಕಣಜದಲ್ಲಿಟ್ಟು ವಿಭಿನ್ನವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪೂರ್ವ ವಿದ್ಯಾರ್ಥಿಗಳು,ಎಮ್ ಪಿ ಇ ಸೊಸೈಟಿ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಶತಮಾನೋತ್ಸವ ‘ಲೋಗೋ ಅನಾವರಣ’ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಹೊಂದಿರಬೇಕು.ಕಿಂಚಿತ್ತಾದರು ನೆರವು ನೀಡಬೇಕು‌.ಆಗ ಮಾತ್ರ ಶಾಲೆ ಅಭಿವೃದ್ಧಿ ಹೊಂದಲು ಸಾಧ್ಯ.ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು ನಾವೆಲ್ಲರೂ ಇದನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಸಂಘಟಕರ ಜೊತೆ ಎಲ್ಲರು ಈ ಮಹತ್ಕಾರ್ಯಕ್ಕೆ ಕೈ ಜೋಡಿಸಬೇಕು.ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಶಾಲೆಗೆ ಜಾಗ ನೀಡಿದವರು,ಸಂಸ್ಥಾಪಕರು, ಮುನ್ನಡೆಸಿಕೊಂಡು ಬಂದವರನ್ನು ಸ್ಮರಿಸುವುದು ನಮ್ಮೆಲ್ಲರ‌ ಆದ್ಯ ಕರ್ತವ್ಯ.ಆ ಕಾರ್ಯವಾಗಬೇಕು ಎಂದರು.
ಇನ್ನೊರ್ವ ಶಾಲಾ ಪೂರ್ವ ವಿದ್ಯಾರ್ಥಿ ಶಿವರಾಮ ನಾಯ್ಕ ಮಾತನಾಡಿ ಅಂದಿನ ಶಿಕ್ಷಣಕ್ಕು ,ಇಂದಿನ ಶಿಕ್ಷಣಕ್ಕು ಬಹಳಷ್ಟು ವ್ಯತ್ಯಾಸಗಳಿದೆ.ಇಂದು ಶಾಲೆಗೆ ಸಕಲ ಸೌಲಭ್ಯಗಳು,ಸೌಕರ್ಯಗಳಿದೆ.ಅಂದು ಯಾವುದೇ ವಿಶೇಷ ಸೌಕರ್ಯಗಳಿಲ್ಲದಿದ್ದರು ಶಾಲೆ,ಶಿಕ್ಷಕರ ಮೇಲೆ ಅಭಿಮಾನ,ಗೌರವ ಭಾವನೆ ಹೊಂದಿದ್ದರು.ಇಂದು ಅಂತಹ ವಾತಾವರಣ ಕಣ್ಮರೆಯಾಗುತ್ತಿದೆ ಎಂದರು.ಕ್ರಿಯಾತ್ಮಕವಾಗಿ ಲೋಗೊ ಅನಾವರಣ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲೆಗೆ ‘ಶಾಲೆಮನೆ’ ಎಂದು ಹೆಸರಿಡುವ ಜೊತೆಗೆ ಯಾವುದೇ ರಾಜಕೀಯ ಪ್ರವೇಶವಿರದ ‘ವಿದ್ಯಾರ್ಥಿ ಪರಿಷತ್’ ರಚಿಸಲು ಸಲಹೆ ನೀಡಿದರು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಪ್ಪ ನಾಯ್ಕ ಮಾತನಾಡಿ,ಜನರಲ್ಲಿ ಶಾಲಾ ಶತಮಾನೋತ್ಸವದ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಲಿ ಎಂದು ‘ಲೋಗೊ ಅನಾವರಣ’ ಆಯೋಜಿಸಿದ್ದೆವು‌.ಡಿಸೆಂಬರ್ 15,16ರಂದು ನಡೆಯುವ ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಕೇವಲ ಒಂದೆರಡು ಜನರಿಂದಾಗದು.ಎಲ್ಲರಜ ಸಹಕಾರ,ಸಹಭಾಗಿತ್ವ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ನಾಯ್ಕ, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ,ಉಪಾಧ್ಯಕ್ಷೆ ಚೇತನಾ ನಾಯ್ಕ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಭಟ್,ಕಾರ್ಯದರ್ಶಿ ಮೋಹನ್ ನಾಯ್ಕ,ಗಜಾನನ ನಾಯ್ಕ,ಜೇಮ್ಸ್ ಲೊಫೀಸ್,ಶಾಲಾ ಮುಖ್ಯಾಧ್ಯಾಪಕಿ ಸುಧಾ ಭಂಡಾರಿ ಉಪಸ್ಥಿತರಿದ್ದರು.