ಸಿದ್ದಾಪುರ. ತಾಲೂಕಿನ ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ರವಿವಾರ ಶರನ್ನವರಾತ್ರಿಯ ಅಂಗವಾಗಿ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ಹಿಂದುಸ್ತಾನಿ ಗಾಯಕ ಅಶೋಕ ಹುಗ್ಗಣ್ಣನವರ ರಾಗ ಶಾಮಕಲ್ಯಾಣ ದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ನಂತರ ರಾಮ ನಾಮ ಧ್ಯಾನ ವಿಮಲ ಚರಿತ ಸುಖ, ಅಂಬೆಗಾರತಿಯನ್ನು ರಂಭೆಯರು ಬೆಳಗಿರೆ, ಶಾರದೆ ಶುಭಕರಿ ಜಯ ಜಯ ಎಂಬ ಭಕ್ತಿ ರಚನೆಗಳನ್ನು ಭಾವತುಂಬಿ ಹಾಡಿದರು. ತಬಲಾ ಸಾತ್ ನೀಡಿದ ಪ್ರಸಿದ್ಧ ತಬಲವಾದಕ ಅಲ್ಲಮಪ್ರಭು ಕಡಕೋಳ ಹಾಗೂ ಹಾರ್ಮೋನಿಯಂ ಸಾಥ್ ನೀಡಿದ ಪ್ರಕಾಶ್ ಹೆಗಡೆ ಯಡಳ್ಳಿ, ತಂಬೂರ ನುಡಿಸಿದ ಅನಂತಮೂರ್ತಿ ಶಿರಸಿ ಹಾಗೂ ಕೀರ್ತಿ ಶಿರಸಿ ಕಾರ್ಯಕ್ರಮದ ಮೆರೆಗನ್ನು ಹೆಚ್ಚಿಸಿದರು. ಸಂಸ್ಕೃತಿ ಸಂಪದದ ಮುಖ್ಯಸ್ಥರೂ, ಶಂಕರ ಮಠದ ಧರ್ಮಾಧಿಕಾರಿಗಳು ಆದ ವಿಜಯ ಹೆಗಡೆ ದೊಡ್ಮನೆ ಕಲಾವಿದರನ್ನು ಗೌರವಿಸಿದರು. ಎಂ. ಕೆ. ನಾಯ್ಕ ಹೊಸಳ್ಳಿ(ಹೊಸೂರು) ಸ್ವಾಗತಿಸಿದರು. ಕು. ಧಾತ್ರಿ ಹೆಗಡೆ ಹಿತ್ಲಕೈ ಪರಿಚಯಿಸಿದರು. ಟಿ.ಜಿ. ಹೆಗಡೆ ಹೊಸೂರು ವಂದಿಸಿದರು