ಗ್ರಹಪ್ರವೇಶಕ್ಕೆ ತೆರಳಿ 2 ತಾಸು ಕೆಲಸಕ್ಕೆ ತಡವಾಗಿ ಬಂದ ಭಟ್ಕಳ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳು ಸಾರ್ವಜನಿಕ ಪರದಾಟ

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಾರ್ಯಕರ್ತರಿಂದ ಎ.ಸಿ.ಗೆ ದೂರು

ಭಟ್ಕಳ:  ಸರಕಾರಿ ಕಚೇರಿಯ ಸಮಯದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ತಹಸೀಲ್ದಾರ ಕಚೇರಿಯ ಸಿಬ್ಬಂದಿಯ ಗ್ರಹಪ್ರವೇಶಕ್ಕೆ ಮಧ್ಯಾಹ್ನದ ವೇಳೆ ತೆರಳಿ 2 ತಾಸು ವಿಳಂಬವಾಗಿ ಕಚೇರಿಗೆ ಹಾಜರಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಟ ನಡೆಸಿದ್ದು ಈ  ಬಗ್ಗೆ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯಕರ್ತರು ಸಹಾಯಕ ಆಯುಕ್ತರಲ್ಲಿ ದೂರು ನೀಡಿದ ಘಟನೆ  ವರದಿಯಾಗಿದೆ.

ತಾಲೂಕಾ ಆಡಳಿತ ಸೌಧದಲ್ಲಿರುವ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ 5 ರಿಂದ 6 ಸಿಬ್ಬಂದಿಗಳು ಸರ್ಕಾರಿ ಸೇವೆಯ ಅವಧಿಯಲ್ಲಿ ಕಚೇರಿಯ ಸಿಬ್ಬಂದಿ ಯೋರ್ವರ ಮನೆ ಗ್ರಹಪ್ರವೇಶದ ಹಿನ್ನೆಲೆ ತೆರಳಿರುವ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕಾ ಅಧ್ಯಕ್ಷ ನಾಗೇಂದ್ರ ನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿ ನಾಗೇಶ ಅವರು ಮಾಹಿತಿ ಹಕ್ಕಿನಲ್ಲಿ ಹಾಕಿದ್ದ ದಾಖಲಾತಿ ಕೇಳಲು ಹೋದ ವೇಳೆ ತಹಸೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರು ಹಾಗೂ ಓರ್ವ ಮಹಿಳಾ ಸಿಬ್ಬಂದಿ ಬಿಟ್ಟು ಉಳಿದ ಯಾವೊಬ್ಬ ಸಿಬ್ಬಂದಿ ಯು ಇಲ್ಲದಿರುವುದನ್ನು ಗಮನಿಸಿ ಈ ಬಗ್ಗೆ ದೂರು ನೀಡಿದರು.

ಈ ಬಗ್ಗೆ ಶಿರಸ್ತೇದಾರರು 1 ರಿಂದ 3 ಗಂಟೆಯ ಒಳಗಾಗಿ ಗ್ರಹ ಪ್ರವೇಶ ಮುಗಿಸಿ ಬಂದು ಕೆಲಸಕ್ಕೆ ಹಾಜರಾಗುವುದಾಗಿ  ಸಿಬ್ಬಂದಿಗಳು ನನ್ನ ಬಳಿ ಕೇಳಿದ್ದು ತಹಸೀಲ್ದಾರ ರಜೆಯಲ್ಲಿರುದರಿಂದ ನಾನು ಮೊದಲು ಅನುಮತಿ ನೀಡಲು ನಿರಾಕರಿಸಿದ್ದೆ. ಆದಾಗ್ಯೂ ಸಿಬ್ಬಂದಿಗಳು ನನ್ನ ಬಳಿ 3 ಗಂಟೆ ಒಳಗಾಗಿ ಕಚೇರಿಯ ಸಮಯಕ್ಕೆ ಬಂದು ತಲುಪಲಿದ್ದೇವೆ ಎಂದು ಹೇಳಿದ ಹಿನ್ನೆಲೆ ಅನುಮತಿ ನೀಡಿದ್ದೆ. ಒಂದು ವೇಳೆ ತಡವಾದರೆ ನಾನು ಜವಾಬ್ದಾರನಲ್ಲ ಎಂದು ಸೂಚಿಸಿದ್ದೆ ಎಂದು ತಿಳಿಸಿದರು.

ತದ ನಂತರ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕಾ ಅಧ್ಯಕ್ಷ ನಾಗೇಂದ್ರ ನಾಯ್ಕ ಸ್ಥಳದಿಂದಲೇ ಸಹಾಯಕ ಆಯುಕ್ತರಿಗೆ ಹಾಗೂ ತಹಶೀಲ್ದಾರರಿಗೆ ಕರೆ ಮಾಡಿ ಸಿಬ್ಬಂದಿಗಳು ಗೈರಾಗಿರುವ ಬಗ್ಗೆ ದೂರು ನೀಡಿದರು.

ತಕ್ಷಣ ಕಚೇರಿಗೆ ಬಂದ ಸಹಾಯಕ ಆಯುಕ್ತೆ ಡಾ. ನಯನಾ ಎನ್.  ಗೈರಾದ ಸಿಬ್ಬಂದಿ ಗಳನ್ನು ಕರೆಸಿ ಗೈರಾಗಿರುವ ಬಗ್ಗೆ ವಿಚಾರಣೆ ನಡೆಸದೇ ವೇದಿಕೆ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ತಮ್ಮ ಕಚೇರಿಗೆ ಕರೆಸಿ ಸಿಬ್ಬಂದಿಗಳಿಗೆ ನೋಟಿಸ್ ನೀಡುವುದಾಗಿ ಕಳುಹಿಸಿದರು.

ಒಬ್ಬರ ಹಿಂದೆ ಒಬ್ಬರು ಬಂದು ಕಚೇರಿಗೆ ಸೇರಿದ ಸಿಬ್ಬಂದಿಗಳು:

ಕುಂದಾಪುರ ಸಮೀಪದಲ್ಲಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಯೋರ್ವರ ಮನೆಯ ಗ್ರಹ ಪ್ರವೇಶಕ್ಕೆ ಸರಕಾರಿ ಕೆಲಸದ ಅವಧಿಗೆ ಬಾರದೇ ಗೈರಾದ ಸಿಬ್ಬಂದಿಗಳು ಅವರ ವಿರುದ್ದ ಸಹಾಯಕ ಆಯುಕ್ತರ ಬಳಿ ದೂರು ಹೋಗಿದೆ ಎಂದು ತಿಳಿದು ತಕ್ಷಣ ಒಬ್ಬರ ಹಿಂದೆ ಒಬ್ಬರು ಕಚೇರಿಗೆ ಬಂದು ತಲುಪಿದ್ದಾರೆ. 1 ಗಂಟೆ ಸಮಯಕ್ಕೆ ತೆರಳಿ 4.30 ಕ್ಕೆ ಬಂದು ಕಚೇರಿಗೆ ಹಾಜರಾಗಿದ್ದು ಮಧ್ಯಾಹ್ನದ ಊಟ ಸಮಯದ ಅವಧಿ 2.30 ಗಂಟೆ ಇದ್ದರು ಸಹ 2 ತಾಸು ಸೇವೆಯಿಂದ ಗೈರಾಗಿರುವುದು ದೂರಿಗೆ ಕಾರಣವಾಗಿದೆ.

ಕೋಟ್ : ನಾಗೇಶ ನಾಯ್ಕ ಹೆಬಳೆ – ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪ್ರಧಾನ ಕಾರ್ಯದರ್ಶಿ

‘ಒಂದು ಮಾಹಿತಿ ಹಕ್ಕಿನ ದಾಖಲೆ ಕೇಳಲು ಬಂದ ವೇಳೆ ತಹಸೀಲ್ದಾ ಕಚೇರಿಯ ಸಿಬ್ಬಂದಿಗಳು ಕುರ್ಚಿ ಖಾಲಿ‌ಖಾಲಿ ಇತ್ತು. ಈ ಬಗ್ಗೆ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದು ಸರಕಾರಿ ಕೆಲಸದ ವೇಳೆ ಗೈರಾದ 5-6 ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವುದಾಗಿ ನಮಗೆ ಭರವಸೆ ನೀಡಿದ್ದ ಹಿನ್ನೆಲೆ ನಾವು ವಾಪಸ್ಸು ಬಂದಿದ್ದೇವೆ. ಕೆಲ‌ದಿನದ ಹಿಂದೆ ಉಸ್ತುವಾರಿ ಸಚಿವರ ಸಭೆಯ ವೇಳೆ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳ ಕಾರ್ಯವೈಖರಿ ಸರಿಯಿಲ್ಲ ಎಂಬ ಬಗ್ಗೆ ದೂರು ನೀಡಿದ್ದು ಆ ಬಳಿಕ ಕಚೇರಿಯ ಸಿಬ್ಬಂದಿಗಳು ತಪ್ಪು ಸರಿಪಡಿಸಿಕೊಂಡಿದ್ದಾರೆಂದು ಅಂದುಕೊಂಡಿದ್ದು ಆದರೆ ಇಂದು ಸಿಬ್ಬಂದಿಗಳ ವರ್ತನೆ ಮಿತಿ ಮೀರಿದೆ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು.