ಹೊನ್ನಾವರ: ತಾಲೂಕಿನ ಸಾಲ್ಕೋಡದ ಕೊಂತಪಾಲ ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನವರಾತ್ರಿಯ ಪ್ರತಿದಿನ ಆರತಿ ಕುಂಕುಮಾರ್ಚನೆ ನಡೆಯಿತು. ಶ್ರೀ ದುರ್ಗಾಹೋಮ, ಮಹಾಪೂಜೆ, ಅನ್ನಸಂತರ್ಪಣೆ ನೇರವೇರಿತು. ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಸೇವೆ ಸಲ್ಲಿಸಿದರು. ಕಲಾಧರ ಯಕ್ಷರಂಗ ಜಲವಳ್ಳಿ ಇವರಿಂದ ಯಕ್ಷ-ಗಾನ-ವೈಭವ ಜನಮನ ಸೆಳೆಯಿತು. ಭಾಗವತರಾಗಿ ಸಿದ್ದಾಪುರದ ಶ್ರೀರಕ್ಷಾ ಹೆಗಡೆ, ಜಾಹ್ನವಿ ಜಲವಳ್ಳಿ, ಮದ್ದಳೆವಾದಕರಾಗಿ ಯಲ್ಲಾಪುರದ ಎಂ.ಜಿ.ಹೆಗಡೆ, ಚಂಡೆವಾದಕರಾಗಿ ಯಡಮೊಗೆ ಶ್ರೀಕಾಂತ ಶೆಟ್ಟಿ, ಅತಿಥಿ ಭಾಗವತರಾಗಿ ವಿಷ್ಣು ಮರಾಠಿ ತೊಳಸಾಣಿ ಸಹಕಾರ ನೀಡಿದರು.
ಕೊಂತಪಾಲ ಶ್ರೀ ಚೌಡೇಶ್ವರಿ ಸಮಿತಿಯ ವತಿಯಿಂದ ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ, ಭಾಗವತರಾದ ವಿಷ್ಣು ಮರಾಠಿ, ಶ್ರೀರಕ್ಷಾ ಹೆಗಡೆ ಇವರನ್ನು ಸನ್ಮನಿಸಲಾಯಿತು. ಸನ್ಮಾನ ಸ್ವೀಕರಿಸಿದ ವಿದ್ಯಾಧರ ಜಲವಳ್ಳಿ ಮಾತನಾಡಿ, ಕಲಾವಿದರು ಎಷ್ಟೇ ಎತ್ತರಕ್ಕೆ ಬೆಳೆದರೂ ಮದಲು ಒಳ್ಳೆಯ ಮನುಷ್ಯನಾಗಬೇಕು. ತಪ್ಪು ಒಪ್ಪುಗಳು ಮನುಷ್ಯನ ಬದುಕಿನಲ್ಲಿ ಬರುವುದು ಸಾಮಾನ್ಯ. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ಬದುಕನ್ನು ಸಾಗಿಸುವವನು ಒಳ್ಳೆಯ ಮನುಷ್ಯನಾಗುತ್ತಾನೆ. ಕಲಾವಿದರು ಬೆಳೆಯಬೇಕು. ಕೊಂತಪಾಲ ಶ್ರೀ ಚೌಡೇಶ್ವರಿ ಆರಾಧಕರು ಸ್ಥಳಿಯ ಕಲಾವಿದರನ್ನು ಗುರುತಿಸಿ ಆತ್ಮೀಯತೆಯಿಂದ ಗೌರವಿಸುತ್ತಿದ್ದಾರೆ ಎಂದರು. ಸಮಿತಿಯ ದತ್ತಾತ್ರಯ ಶೆಟ್ಟಿ ಮತ್ತು ಗೋಪಾಲ ಶೆಟ್ಟಿ ಹಾಗೂ ಕುಟುಂಬದವರು ಉಪಸ್ಥಿತರಿದ್ದರು