ವಾಷಿಂಗ್ಟನ್: ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಹತ್ಯೆ ಮಾಡಿದೆ. ಈ ಕುರಿತು ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ‘ಅಮೆರಿಕಾ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹತನಾಗಿದ್ದಾನೆ’ ಎಂದು ಘೋಷಣೆ ಮಾಡಿದ್ದಾರೆ. ಈತ ಸೆಪ್ಟೆಂಬರ್ 11, 2001ರ ವಿಶ್ವ ವಾಣಿಜ್ಯ ಸಂಸ್ಥೆ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ. 9/11 ದಾಳಿ ನಡೆದ ಬರೋಬ್ಬರಿ 21 ವರ್ಷಗಳ ಬಳಿಕ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಡ್ರೋನ್ ದಾಳಿ ನಡೆಸಿ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಬೈಡನ್, ಶನಿವಾರ ಕಾಬೂಲ್‌ನಲ್ಲಿ ನಡೆಸಲಾದ ದಾಳಿಯಲ್ಲಿ ಝವಾಹಿರಿ ಹತನಾಗಿದ್ದಾನೆ ಎಂದು ಹೇಳಿದ್ದಾರೆ. ಆತನ ವಿರುದ್ಧದ ಕಾರ್ಯಾಚರಣೆಗೆ ಅಂತಿಮ ಅನುಮೋದನೆ ನೀಡಿದ್ದೆ. ದಾಳಿಯಲ್ಲಿ ನಾಗರಿಕರ ಹತ್ಯೆಯಾಗಿಲ್ಲ. ಇದೀಗ ನ್ಯಾಯ ಒದಗಿಸಲಾಗಿದೆ. ಉಗ್ರ ಸಂಘಟನೆ ನಾಯಕ ಇನ್ನಿಲ್ಲ’ ಎಂದು ಬೈಡನ್ ಹೇಳಿದ್ದಾರೆ.
ನಮಗೆ ಹಾನಿ ಮಾಡಲು ಬಯಸುವವರ ವಿರುದ್ಧ ಅಮೆರಿಕಾದ ಜನರನ್ನು ರಕ್ಷಿಸುವ ನಮ್ಮ ಸಂಕಲ್ಪ ಮತ್ತು ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ಮುಂದುವರೆಸಿದ್ದೇವೆ. ಎಷ್ಟು ಸಮಯ ತೆಗೆದುಕೊಂಡರೂ ಪರವಾಗಿಲ್ಲ. ನೀವು ಎಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೂ ಸರಿ, ನಾವು ನಿಮ್ಮನ್ನು ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ ಎಂದು ಜೋ ಬೈಡನ್ ಗುಡುಗಿದ್ದಾರೆ.
ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ವಿಶೇಷ ಪಡೆಗಳು 2011ರಲ್ಲಿ ಹತ್ಯೆ ಮಾಡಿದ ಬಳಿಕ ಝವಾಹಿರಿ ಅಲ್‌ಕೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಆತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ ಬಹುಮಾನ ಘೋಷಿಸಲಾಗಿತ್ತು.