ನಾಡಿನೆಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ: ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದ ಸಿಲಿಕಾನ್ ಸಿಟಿ ಮಂದಿ.!

ಬೆಂಗಳೂರು: ಇಂದು ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯ ಸಂಭ್ರಮ ಎಲ್ಲೆಲ್ಲೂ ಮನೆಮಾಡಿದೆ. ನಾಗರಪಂಚಮಿ ಹಬ್ಬದ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ.

ಬೆಂಗಳೂರಿನಲ್ಲಿ ಇಂದು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಅಶ್ವತ್ಥ ಕಟ್ಟೆ ಹಾಗೂ ನಾಗರ ಕಲ್ಲಿಗೆ ಹಾಲೆರೆದು ವಿಶೇಷವಾಗಿ ಹಬ್ಬವನ್ನು ಆಚರಿಸಿದರು. ಹುತ್ತಕ್ಕೆ ಹಾಲೆರೆದು, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗಲು ಪೂಜೆ ಸಲ್ಲಿಸಿದರು. ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ವರ್ಷ ಕೊರೋನಾ ಆತಂಕ ಕಡಿಮೆಯಾಗಿದ್ದು, ನಗರದ ಎಲ್ಲಾ ದೇವಸ್ಥಾನಗಳಲ್ಲೂ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾಡುಮಲ್ಲೇಶ್ವರ, ಗವಿಗಂಗಾಧೇಶ್ವರ, ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಇಂದು ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಾಲಯದಲ್ಲಿ ನಾಗನಿಗೆ ಭಕ್ತರು ಹಾಲೆರೆದು ಪ್ರಾರ್ಥಿಸಿದರು.
ದೇವಾಲ್ಯದಲ್ಲಿ ಒಟ್ಟು 122 ನಾಗರ ಕಲ್ಲುಗಳಿದ್ದು, ಭಕ್ತರು ಪೂಜೆಯಲ್ಲಿ ನಿರತರಾಗಿರುವ ದೃಶ್ಯ ಕಂಡುಬಂತು.