ಜೋಯಿಡಾ : ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂದದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ಶುಕ್ರವಾರ ಸಾಕ್ಷರತಾ ಕೇಂದ್ರದ ಪ್ರಾರoಭೋತ್ಸವ ಕಾರ್ಯಕ್ರಮವು ಜರುಗಿತು.
ನೂತನ ಸಾಕ್ಷರತಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯ್ತು ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಅವರು ಅಕ್ಷರ ಜ್ಞಾನ ಪ್ರತಿಯೊಬ್ಬರಿಗೂ ಅತೀ ಅವಶ್ಯ. ಈ ನಿಟ್ಟಿನಲ್ಲಿ ಎಲ್ಲರು ಸಾಕ್ಷರರಾಗಬೇಕೆಂಬ ಉದ್ದೇಶದಿಂದ ಆರಂಭವಾದ ಸಾಕ್ಷರತಾ ಕೇಂದ್ರ ಜ್ಞಾನದ ಬೆಳಕನ್ನು ಪಸರಿಸಲೆಂದು ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಚಿತ್ರಾ ಶಿವರಾಮ ಕುಟ್ಟಿಕರ ಅವರು ವಹಿಸಿ ನೂತನ ಸಾಕ್ಷರತಾ ಕೇಂದ್ರಕ್ಕೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ಶಿವರಾಮ ಕುಟ್ಟಿಕರ್, ಮಾರುತಿ ಕುಟ್ಟಿಕರ್, ವಿಜಯ ಮಿರಾಶಿ ಕಲಿಕಾರ್ಥಿಗಳಾದ ಭಾಗೀರಥಿ ಪಾಡಕರ,ಲಕ್ಷ್ಮಿ ಸಾವರ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ವಯಂಸೇವಕಿ ಸ್ವಾತಿ ವಂದಿಸಿದರು.